
ನವದೆಹಲಿ: ‘ತೆಲುಗು ನಟಿ ಪ್ರತ್ಯುಷಾ ಅವರ ಮೇಲೆ ಅತ್ಯಾಚಾರವಾಗಿಲ್ಲ, ಅವರ ಕತ್ತು ಹಿಸುಕಿ ಹತ್ಯೆ ಮಾಡಲಾಗಿಲ್ಲ. ವಿಷ ಸೇವಿಸಿ ಅವರು ಮೃತಪಟ್ಟಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಆತ್ಮಹತ್ಯೆಗೆ ಪ್ರಚೋದಿಸಿದ್ದಕ್ಕಾಗಿ ಗುಡಿಪಲ್ಲಿ ಸಿದ್ಧಾರ್ಥ್ ರೆಡ್ಡಿ ಎಂಬುವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಟಿ ಪ್ರತ್ಯುಷಾ ಅವರು 2002ರಲ್ಲಿ ಫೆ.24ರಂದು ಹೈದರಾಬಾದ್‌ನಲ್ಲಿ ಮೃತಪಟ್ಟಿದ್ದರು. ಆಂಧ್ರ ಪ್ರದೇಶ ಹೈಕೋರ್ಟ್ ಇದೇ ಪ್ರಕರಣದಲ್ಲಿ ರೆಡ್ಡಿ ಅವರಿಗೆ 2011ರಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ರೆಡ್ಡಿ ಹಾಗೂ ಪ್ರತ್ಯುಷಾ ಆರು ವರ್ಷ ಪರಸ್ಪರ ಪ್ರೀತಿಸಿದ್ದರು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠ ನಡೆಸಿತು. ಮಗಳ ಸಾವಿನ ಕುರಿತು ಹಲವು ಅನುಮಾನಗಳಿವೆ ಎಂದು ತಾಯಿ ಪಿ. ಸರೋಜಿನಿ ದೇವಿ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಪೀಠ ರದ್ದು ಮಾಡಿತು.
ಏನಾಗಿತ್ತು?: ಇಬ್ಬರ ಪ್ರೀತಿ ಬಗ್ಗೆ ನಟಿ ಮನೆಯವರಿಗೆ ಒಪ್ಪಿಗೆ ಇತ್ತು. ಆದರೆ, ರೆಡ್ಡಿ ಅವರ ತಾಯಿಗೆ ಒಪ್ಪಿಗೆ ಇರಲಿಲ್ಲ. ಆದ್ದರಿಂದ, ರೆಡ್ಡಿ ಮತ್ತು ನಟಿ ಇಬ್ಬರೂ ಆತ್ಮಹತ್ಯೆಗೆ ನಿರ್ಧರಿಸಿದರು. 2002ರ ಫೆ.23ರಂದು ಇಬ್ಬರೂ ವಿಷ ಸೇವಿಸಿದ್ದರು. ಈ ಬಳಿಕ ಬದುಕಬೇಕೆಂಬ ಬಯಕೆ ಇಬ್ಬರಿಗೂ ಮೂಡಿ, ಹತ್ತಿರದ ಆಸ್ಪತ್ರೆಗೆ ತೆರಳಿದರು. ಚಿಕಿತ್ಸೆ ಬಳಿಕವೂ ನಟಿ ಪ್ರತ್ಯುಷಾ ಬದುಕಲಿಲ್ಲ. ಆದರೆ, ರೆಡ್ಡಿ ಬದುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.