ADVERTISEMENT

ಭಕ್ತರು ದೇವಸ್ಥಾನಕ್ಕೆ ನೀಡುವ ಹಣ ಕಲ್ಯಾಣ ಮಂಟಪ ನಿರ್ಮಾಣಕ್ಕಲ್ಲ: ಸುಪ್ರೀಂ ಕೋರ್ಟ್

ಪಿಟಿಐ
Published 16 ಸೆಪ್ಟೆಂಬರ್ 2025, 12:36 IST
Last Updated 16 ಸೆಪ್ಟೆಂಬರ್ 2025, 12:36 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೇವಾಲಯದ ಹಣವನ್ನು ಸಾರ್ವಜನಿಕ ಅಥವಾ ಸರ್ಕಾರಿ ನಿಧಿಯಾಗಿ ಪರಿಗಣಿಸಲಾಗುವುದಿಲ್ಲ ಎಂಬ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ದೇವಾಲಯಗಳಿಗೆ ಭಕ್ತರು ನೀಡುವ ಹಣವನ್ನು ಮದುವೆ ಮಂಟಪಗಳ ನಿರ್ಮಾಣಕ್ಕೆ ಬಳಸುವಂತಿಲ್ಲ ಎಂದು ಮಂಗಳವಾರ ಹೇಳಿದೆ.

ಐದು ದೇವಸ್ಥಾನಗಳ ಹಣದಿಂದ ಕಲ್ಯಾಣ ಮಂಟಪ

ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಐದು ದೇವಾಲಯಗಳಿಗೆ ಸೇರಿದ ಹಣ ಬಳಸಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ರದ್ದುಗೊಳಿಸಿತ್ತು. ಆಗಸ್ಟ್ 19 ರ ತನ್ನ ಆದೇಶದಲ್ಲಿ, ಮದುವೆ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವ ಉದ್ದೇಶದಿಂದಾಗಿ ಕಲ್ಯಾಣ ಮಂಟಪಗಳನ್ನು ನಿರ್ಮಿಸುವ ಸರ್ಕಾರದ ನಿರ್ಧಾರವು ಧಾರ್ಮಿಕ ಉದ್ದೇಶಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ADVERTISEMENT

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ದ್ವಿಸದಸ್ಯ ಪೀಠವು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದರು. ಭಕ್ತರು ಕಲ್ಯಾಣ ಮಂಟಪಗಳನ್ನು ನಿರ್ಮಿಸುವ ಉದ್ದೇಶಕ್ಕಾಗಿ ದೇವಸ್ಥಾನಕ್ಕೆ ಹಣ ನೀಡುವುದಿಲ್ಲ. ಅದು ದೇವಾಲಯದ ಅಭಿವೃದ್ಧಿ ದೃಷ್ಠಿಯಿಂದ ನೀಡಿರಬಹುದು. ದೇವಾಲಯದ ಆವರಣದಲ್ಲಿ ಮದುವೆ ಕಾರ್ಯಕ್ರಮ ನಡೆಯುವಾಗ ಅಶ್ಲೀಲ ಹಾಡುಗಳನ್ನು ಹಾಕಿ ಪಾರ್ಟಿ ಮಾಡುವುದು ದೇವಸ್ಥಾನದ ಉದ್ದೇಶವೇ? ಎಂದು ದ್ವಿಸದಸ್ಯ ಪೀಠ ಪ್ರಶ್ನಿಸಿತು.

ಕಲ್ಯಾಣ ಮಂಟಪಗಳ ಬದಲು ದೇವಸ್ಥಾನದ ಹಣವನ್ನು ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳಂತಹ ದತ್ತಿ ಉದ್ದೇಶಗಳಿಗೆ ಬಳಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು. ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ಇತರ ವಕೀಲರು ಅರ್ಜಿದಾರರ ಪರ ವಾದ ಮಂಡಿಸಿದರು.

ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಎಂದು ನಿರ್ಧರಿಸುವುದು ಸಮಸ್ಯೆಯಾಗಿದೆ ಎಂದು ಪೀಠ ಗಮನಿಸಿದೆ. ಅದರ ಹೊರತಾಗಿಯೂ ಈ ಅರ್ಜಿಯ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದೆ. ನಾವು ಈ ವಿಷಯವನ್ನು ಆಲಿಸುತ್ತೇವೆ ಮತ್ತು ಅರ್ಜಿದಾರರಿಗೆ ನಾವು ಯಾವುದೇ ತಡೆಯಾಜ್ಞೆ ಈ ಸಂದರ್ಭದಲ್ಲಿ ನೀಡುತ್ತಿಲ್ಲ ಎಂದು ಪೀಠ ಹೇಳಿದೆ.

ದೇವಾಲಯದ ನಿಧಿಯಿಂದ ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಅನುಮತಿ ನೀಡುವ ಸರ್ಕಾರಿ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಮೇರೆಗೆ ಹೈಕೋರ್ಟ್ ತೀರ್ಪು ನೀಡಿದೆ. ವಿಧಾನಸಭೆಯ ಬಜೆಟ್ ಭಾಷಣದ ಸಮಯದಲ್ಲಿ 27 ದೇವಾಲಯಗಳಿಂದ ಸಂಗ್ರಹವಾದ ₹80 ಕೋಟಿಯನ್ನು ಕಲ್ಯಾಣ ಮಂಟಪಗಳ ನಿರ್ಮಾಣಕ್ಕೆ ಖರ್ಚು ಮಾಡುವ ಮೂಲಕ ಮದುವೆ ಮಂಟಪಗಳನ್ನು ನಿರ್ಮಿಸುವುದಾಗಿ ಘೋಷಿಸಿದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವರ ಹೇಳಿಕೆಯನ್ನು ಸರ್ಕಾರಿ ಆದೇಶಗಳು ಬಹಿರಂಗಪಡಿಸಿದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ಪರ ವಕೀಲರ ವಾದವೇನು?

ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ ಮತ್ತು ಅದರ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ದೇವಾಲಯದ ನಿಧಿ ಅಥವಾ ಹೆಚ್ಚುವರಿ ಹಣವನ್ನು ಕಲ್ಯಾಣ ಮಂಟಪಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ವಾದಿಸಿದರು. ದೇವಾಲಯದ ನಿಧಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಉದ್ದೇಶಿಸಲಾಗಿಲ್ಲ ಮತ್ತು ಈ ಸರ್ಕಾರಿ ಆದೇಶಗಳು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ 1959 ರ ಸೆಕ್ಷನ್ 35, 36 ಮತ್ತು 66 ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ಗೆ ತಿಳಿಸಿದರು.

ಸರ್ಕಾರದ ಪರ ವಕೀಲರ ವಾದವೇನು?

ಹಿಂದೂ ವಿವಾಹಗಳನ್ನು ನಡೆಸುವುದು ಧಾರ್ಮಿಕ ಚಟುವಟಿಕೆಗಳಾಗಿದ್ದು, ಹಿಂದೂಗಳು ಕಡಿಮೆ ಖರ್ಚಿನಲ್ಲಿ ಮದುವೆ ಮಾಡಲು ಸಹಾಯ ಮಾಡುವ ಸಲುವಾಗಿ ಸರ್ಕಾರವು ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.