ADVERTISEMENT

3 ವರ್ಷ ವಕೀಲಿಕೆ ಕಡ್ಡಾಯ: ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

ಪಿಟಿಐ
Published 15 ಜನವರಿ 2026, 14:40 IST
Last Updated 15 ಜನವರಿ 2026, 14:40 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪ್ರವೇಶ ಪಡೆಯಲು ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸ (ವಕೀಲಿಕೆ) ಕಡ್ಡಾಯಗೊಳಿಸಿದ್ದ ಸುಪ್ರೀಂಕೋರ್ಟ್‌, ಇದೀಗ ಹೈಕೋರ್ಟ್‌ಗಳು, ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯಗಳು ಮತ್ತು ಇತರೆ ಕಾನೂನು ಶಾಲೆಗಳ (ಲಾ ಸ್ಕೂಲ್‌) ಅಭಿಪ್ರಾಯ ಬಯಸಿದೆ.

ನಾಲ್ಕು ವಾರಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿ ಇದ್ದ ಪೀಠವು ಗುರುವಾರ ಸೂಚಿಸಿದೆ.

ಕಾನೂನು ಪದವಿ ಪಡೆದು ಹೊರಬಂದ ತಕ್ಷಣವೇ ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪ್ರವೇಶ ಪಡೆಯುವುದನ್ನು ಕಳೆದ ವರ್ಷ ಮೇ 20ರಂದು ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಪೀಠವು ನಿರ್ಬಂಧಿಸಿತ್ತು. ಅಲ್ಲದೇ ಕನಿಷ್ಠ ಮೂರು ವರ್ಷಗಳ ವಕೀಲಿಕೆಯ ಮಾನದಂಡವನ್ನು ಕಡ್ಡಾಯಗೊಳಿಸಿತ್ತು.

ADVERTISEMENT

ಹೊಸ ಮಾನದಂಡದಿಂದ ಅಂಗವಿಕಲ ಪದವೀಧರರಿಗೆ ವಿನಾಯಿತಿ ಕೋರಿ ಭೂಮಿಕಾ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಜಯ್‌ ಬಿಷ್ಣೋಯಿ ಅವರು ಇದ್ದ ಪೀಠವು ಅರ್ಜಿ ವಿಚಾರಣೆ ನಡೆಸಿತು. 

ಅಂಗವಿಕಲ ಪದವೀಧರರನ್ನು ಕೆಲ ವಕೀಲರು ವಕೀಲಿಕೆ ಅಭ್ಯಾಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಹೀಗಾಗಿ ವಿನಾಯಿತಿ ಅಗತ್ಯವಿದೆ ಎಂದು ಕೋರಿದ್ದ ಸಂಸ್ಥೆ, ಮಧ್ಯಪ್ರದೇಶದಲ್ಲಿ ಈ ವಿನಾಯಿತಿ ಇರುವುದನ್ನು ಗಮನಕ್ಕೆ ತಂದಿತ್ತು.

‘ಈ ರೀತಿಯ ವಿನಾಯಿತಿ ಸೇವೆಗೆ ಸೇರಿದ ಸಂದರ್ಭದಲ್ಲಿ ಕೀಳರಿಮೆ ಭಾವನೆ ಉಂಟುಮಾಡಬಹುದು. ಎಲ್ಲ ರಾಜ್ಯಗಳಲ್ಲೂ ಸಮಾನ ಮಾನದಂಡ ಇರುವುದು ಒಳಿತು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಮೂರು ವರ್ಷಗಳ ವಕೀಲಿಕೆ ಕಡ್ಡಾಯ ವಿಚಾರದಲ್ಲಿ ಕೆಲ ಯುವ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ ಮತ್ತು ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಕಾನೂನು ಶಾಲೆಗಳು ಮತ್ತು ಎಲ್ಲ ಹೈಕೋರ್ಟ್‌ಗಳಿಂದ ನಾಲ್ಕು ವಾರಗಳ ಒಳಗೆ ಅಭಿಪ್ರಾಯ ಬಯಸಿದ್ದೇವೆ. ಯಾವುದೇ ಮಾರ್ಪಾಡು ಮಾಡುವ ಅಗತ್ಯಬಿದ್ದರೆ, ಎಲ್ಲರಿಗೂ ಅನ್ವಯಿಸುತ್ತೇವೆ’ ಎಂದು ಪೀಠ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.