ADVERTISEMENT

ಬೀದಿ ನಾಯಿ ಹಾವಳಿ: ಪ್ರಮಾಣ ಪತ್ರ ಸಲ್ಲಿಸದ್ದಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

ಪಿಟಿಐ
Published 27 ಅಕ್ಟೋಬರ್ 2025, 14:18 IST
Last Updated 27 ಅಕ್ಟೋಬರ್ 2025, 14:18 IST
.
.   

ನವದೆಹಲಿ: ಬೀದಿನಾಯಿಗಳ ಹಾವಳಿ ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಇದುವರೆಗೂ ಪ್ರಮಾಣ ಪತ್ರಗಳನ್ನು ಸಲ್ಲಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಬಿಟ್ಟು ಇತರ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನವೆಂಬರ್‌ 3ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಹಾಗೂ ಎನ್‌.ವಿ.ಅಂಜಾರಿಯಾ ಅವರ ವಿಶೇಷ ನ್ಯಾಯಪೀಠ ನಿರ್ದೇಶಿಸಿದೆ. 

ಆಗಸ್ಟ್ 22ರಂದು ತಾನು ಆದೇಶ ನೀಡಿದ್ದರೂ ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಹೊರತುಪಡಿಸಿ ಇತರ ಯಾವುದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ಪೀಠ ಹೇಳಿತು.

ADVERTISEMENT

‘ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಲಾಗಿದೆ. ಅವರು ಪ್ರತಿಕ್ರಿಯಿಸದ ಕಾರಣ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮುಂಬರುವ ಸೋಮವಾರ ಬೆಳಿಗ್ಗೆ 10.30ಕ್ಕೆ ಈ ನ್ಯಾಯಾಲಯದಲ್ಲಿ ಹಾಜರಾಗಬೇಕು. ಪ್ರಮಾಣ ಪತ್ರಗಳನ್ನು ಏಕೆ ಸಲ್ಲಿಸಿಲ್ಲ ಎಂಬ ವಿವರಣೆ ನೀಡಬೇಕು’ ಎಂದು ಸೂಚಿಸಿತು.

ಪ್ರಮಾಣ ಪತ್ರಗಳನ್ನು ಸಲ್ಲಿಸದ ರಾಜ್ಯಗಳ ಯಾವುದೇ ಪ್ರತಿನಿಧಿ ಸೋಮವಾರದ ವಿಚಾರಣೆ ವೇಳೆ ಹಾಜರಿರಲಿಲ್ಲ ಎಂಬುದನ್ನು ಪೀಠವು ಗಮನಿಸಿತು. ಬೀದಿ ನಾಯಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ಜುಲೈ 28ರಂದು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ (ದೆಹಲಿ–ಎನ್‌ಸಿಆರ್‌) ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಆಗಸ್ಟ್‌ 11ರಂದು ಆದೇಶಿಸಿತ್ತು. ಆದರೆ, ಬೀದಿ ನಾಯಿಗಳ ಸ್ಥಳಾಂತರ ವಿರೋಧಿಸಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಾನು ಹೊರಡಿಸಿದ್ದ ಆದೇಶ ‘ವಿಪರೀತ ಕಠೋರ’ವಾಗಿತ್ತು ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌ ಈ ಆದೇಶವನ್ನು ಮಾರ್ಪಡಿಸಿ ಆಗಸ್ಟ್‌ 22ರಂದು ಹಲವು ನಿರ್ದೇಶನಗಳನ್ನು ನೀಡಿತ್ತು. 

ಬೀದಿ ನಾಯಿಗಳ ಉಪದ್ರವಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಷ್ಟ್ರವ್ಯಾಪಿ ಅನ್ವಯವಾಗುವ ನೀತಿಯೊಂದನ್ನು ರೂಪಿಸುವ ಇಂಗಿತ ವ್ಯಕ್ತಪಡಿಸಿತಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿ ಕೈಗೊಳ್ಳುವ ಕ್ರಮಗಳ ವ್ಯಾಪ್ತಿಯನ್ನು ರಾಷ್ಟ್ರ ರಾಜಧಾನಿ ಪ್ರದೇಶದ (ದೆಹಲಿ–ಎನ್‌ಸಿಆರ್‌) ಆಚೆಗೂ ಹಿಗ್ಗಿಸಲು ನಿರ್ಧರಿಸಿತ್ತು. 

‘ಅಧಿಕಾರಿಗಳು ಪತ್ರಿಕೆ ಓದುವುದಿಲ್ಲವೇ?’

ವಿಚಾರಣೆ ವೇಳೆ ವಕೀಲರೊಬ್ಬರು ಕೆಲವೊಂದು ಮಾರ್ಗಸೂಚಿಗಳನ್ನು ಉಲ್ಲೇಖಿಸಿದಾಗ ಪೀಠವು ‘ಸಂಬಂಧಪಟ್ಟ ಅಧಿಕಾರಿಗಳು ಬಂದು ಆ ವಿಚಾರವನ್ನು ಹೇಳಲಿ’ ಎಂದಿತು. ಪ್ರಮಾಣ ಪತ್ರ ಸಲ್ಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಗಸ್ಟ್‌ 22ರಂದು ನೋಟಿಸ್‌ ಕಳುಹಿಸಲಾಗಿತ್ತು ಹಾಗೂ ಆ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿತ್ತು ಎಂದಿತು. ‘ನಿಮ್ಮ ಅಧಿಕಾರಿಗಳು ಪತ್ರಿಕೆಗಳನ್ನು ಓದುವುದಿಲ್ಲವೇ? ಅವರು ಸಾಮಾಜಿಕ ಮಾಧ್ಯಮಗಳ ಬಗ್ಗೆ ತಿಳಿದುಕೊಂಡಿಲ್ಲವೇ? ಔಪಚಾರಿಕ ನೋಟಿಸ್ ನೀಡಬೇಕೆಂದು ಅವರು ಬಯಸುತ್ತಿದ್ದಾರೆಯೇ? ಆಗಸ್ಟ್ 22ರ ಆದೇಶದಲ್ಲಿ ಎಲ್ಲ ಅಂಶಗಳನ್ನೂ ಉಲ್ಲೇಖಿಸಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗ ಒಂದೊಂದೇ ನೆಪಗಳನ್ನು ಹೇಳಬೇಡಿ’ ಎಂದು ಪೀಠ ತೀಕ್ಷ್ಣವಾಗಿ ಹೇಳಿತು.

‘ದೇಶದ ಬಗ್ಗೆ ಕೆಟ್ಟ ಚಿತ್ರಣ’

‘ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ನಿರಂತರ ಘಟನೆಗಳು ನಡೆಯುತ್ತಿವೆ. ಪ್ರಮಾಣ ಪತ್ರ ಸಲ್ಲಿಸಬೇಕೆಂದು ನಿರ್ದೇಶನ ನೀಡಿದ್ದರೂ ಅಕ್ಟೋಬರ್‌ 27ರವರೆಗೂ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಬೀದಿ ನಾಯಿಗಳ ವಿಚಾರದಲ್ಲಿ ವಿದೇಶಗಳಲ್ಲಿ ನಮ್ಮ ದೇಶವನ್ನು ಕೆಟ್ಟದಾಗಿ ಚಿತ್ರಿಸಲಾಗುತ್ತಿದೆ’ ಎಂದು ಪೀಠವು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.