ಬೀದಿ ನಾಯಿ
(ಸಾಂದರ್ಭಿಕ ಚಿತ್ರ)
ನವದೆಹಲಿ: ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅಶ್ರಯತಾಣಗಳಿಗೆ ಕಳುಹಿಸುವಂತೆ ಈ ಹಿಂದೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ಇಂದು (ಶುಕ್ರವಾರ) ಆದೇಶದಲ್ಲಿ ಮಾರ್ಪಾಡು ಮಾಡಿದೆ.
ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದಕ್ಕೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೊಸ ಆದೇಶವನ್ನು ಹೊರಡಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ 10 ಪ್ರಮುಖ ಅಂಶಗಳು ಇಲ್ಲಿವೆ.
1. ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ, ರೋಗ ನಿರೋಧಕ ಚುಚ್ಚುಮದ್ದು ನೀಡಿ ಅದೇ ಪ್ರದೇಶದಲ್ಲಿ ಬಿಡಬೇಕು.
2. ರೇಬಿಸ್ ಇರುವ ಅಥವಾ ರೇಬಿಸ್‌ಗೆ ತುತ್ತಾಗಿದೆ ಎಂದು ಶಂಕಿಸಲಾಗಿರುವ ಹಾಗೂ ಕ್ರೂರವಾಗಿ ವರ್ತಿಸುವ ನಾಯಿಗಳ ಸ್ಥಳಾಂತರ ಇಲ್ಲ.
3. ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್ 11ರಂದು ನೀಡಿದ್ದ ನಿರ್ದೇಶನವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ.
4. ಬೀದಿ ನಾಯಿಗಳಿಗೆ ಜನರು ಆಹಾರ ನೀಡಲು ಸ್ಥಳೀಯ ಅಧಿಕಾರಿಗಳು ಪ್ರತ್ಯೇಕವಾದ ಸ್ಥಳವನ್ನು ಗುರುತಿಸಬೇಕು.
5. ಜನಸಂಖ್ಯೆ ಹಾಗೂ ಬೀದಿ ನಾಯಿಗಳ ಸಂಖ್ಯೆ ಆಧರಿಸಿ ಆಹಾರ ನೀಡುವ ಪ್ರದೇಶಗಳನ್ನು ಸ್ಥಳೀಯ ಸಂಸ್ಥೆಗಳು ರಚಿಸಬೇಕು.
6. ಬೀದಿ ನಾಯಿಗಳಿಗೆ ಬೀದಿಗಳಲ್ಲಿ ಆಹಾರ ನೀಡಬಾರದು.
7. ಆಹಾರ ನೀಡುವುದಕ್ಕೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಇಡಬೇಕು.
8. ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ ಅಂತಹ ವ್ಯಕ್ತಿಯ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಜರಗಿಸಲಾಗುವುದು.
9. ಇದರ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಬಗ್ಗೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಈ ಪ್ರಕರಣದಲ್ಲಿ ಪಕ್ಷಗಾರರನ್ನಾಗಿಸಿ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಬೀದಿ ನಾಯಿಗಳ ಕುರಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ತನಗೆ ವರ್ಗಾಯಿಸಿಕೊಂಡಿತು.
10. ಎಂಟು ವಾರಗಳ ನಂತರ ಅರ್ಜಿ ವಿಚಾರಣೆಗೆ ಪರಿಗಣಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.