ನವದೆಹಲಿ: ಬೀದಿ ನಾಯಿಗಳ ಸ್ಥಳಾಂತರ ವಿರೋಧಿಸಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇವುಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ರೂಪಿಸಿರುವ ನಿಯಮಗಳ ಅನುಷ್ಠಾನದಲ್ಲಿ ಎನ್‌ಜಿಒಗಳು ಸೇರಿ ಎಲ್ಲರೂ ಹೊಣೆಗಾರಿಕೆ ನಿಭಾಯಿಸಬೇಕು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿನ (ದೆಹಲಿ–ಎನ್‌ಸಿಆರ್) ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಆಗಸ್ಟ್ 11ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ ಮೆಹ್ತಾ ಹಾಗೂ ಎನ್.ವಿ.ಅಂಜಾರಿಯಾ ಅವರು ಇದ್ದ ನ್ಯಾಯಪೀಠ, ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು.
‘ಬೀದಿ ನಾಯಿಗಳ ದಾಳಿಯಿಂದಾಗಿ ಒಂದೆಡೆ ಜನರು ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ, ಅವುಗಳನ್ನು ಘನತೆಯಿಂದ ನೋಡಿಕೊಳ್ಳಬೇಕು ಎಂದು ಪ್ರಾಣಿಪ್ರಿಯರು ಪ್ರತಿಪಾದಿಸುತ್ತಿದ್ದಾರೆ. ಈ ವಿಚಾರದಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂದು ನ್ಯಾಯಪೀಠ ಹೇಳಿತು.
‘ಸಂಸತ್ ಕಾಯ್ದೆ ರೂಪಿಸುತ್ತದೆ. ಸರ್ಕಾರಗಳು ನಿಯಮಗಳನ್ನು ರೂಪಿಸುತ್ತವೆ. ಆದರೆ, ಅವುಗಳ ಅನುಷ್ಠಾನ ಮಾತ್ರ ಆಗುವುದಿಲ್ಲ. ಇಂತಹ ಧೋರಣೆಯೇ ಈಗ ಉದ್ಭವಿಸಿರುವ ಬೀದಿ ನಾಯಿಗಳ ಸಮಸ್ಯೆಗೆ ಕಾರಣ’ ಎಂದು ಪೀಠ ಹೇಳಿದೆ.
‘ಎನ್‌ಜಿಒಗಳು ಈ ವಿಚಾರವಾಗಿ ದೊಡ್ಡ ದನಿಯಲ್ಲಿ ಮಾತನಾಡುತ್ತವೆ. ಆದರೆ, ಈ ವಿಷಯದಲ್ಲಿ ತಮ್ಮ ಕರ್ತವ್ಯಗಳೇನು ಎಂಬುದರ ಕುರಿತು ಅವುಗಳಿಗೆ ಅರಿವು ಇಲ್ಲ. ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅನುಷ್ಠಾನದಲ್ಲಿ ಎನ್‌ಜಿಒಗಳೇ ಮುಂಚೂಣಿಯಲ್ಲಿ ಇದ್ದು ಕಾರ್ಯನಿರ್ವಹಿಸಬೇಕು. ಅದು ಆಗುತ್ತಿಲ್ಲ’ ಎಂದು ಪೀಠ ಚಾಟಿ ಬೀಸಿತು.
ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,‘ಬೀದಿ ನಾಯಿಗಳ ಕಡಿತದಿಂದ ದೇಶದಾದ್ಯಂತ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಬೀದಿ ನಾಯಿಗಳ ಉಪಟಳ ನಿಯಂತ್ರಣದ ವಿಷಯವನ್ನು ಇತ್ಯರ್ಥಪಡಿಸಬೇಕೇ ವಿನಃ ಇದನ್ನು ವಿವಾದ ಮಾಡುವುದು ಸರಿಯಲ್ಲ’ ಎಂದು ಪೀಠಕ್ಕೆ ತಿಳಿಸಿದರು.
‘ಬೀದಿ ನಾಯಿಗಳು ಕಚ್ಚಿ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬೀದಿ ನಾಯಿಗಳ ಕುರಿತು ದೊಡ್ಡ ದನಿಯಲ್ಲಿ ಮಾತನಾಡುವವರು ಕಡಿಮೆ ಸಂಖ್ಯೆಯಲ್ಲಿದ್ದು, ಅವುಗಳಿಂದಾಗಿ ಮೌನವಾಗಿಯೇ ನೋವು ಅನುಭವಿಸುತ್ತಿರುವವರ ಸಂಖ್ಯೆ ದೊಡ್ಡದಿದೆ. ಇದನ್ನು ಗಮನಿಸಬೇಕು’ ಎಂದ ಅವರು, ‘ಬೀದಿ ನಾಯಿಗಳಿಂದ ಎದುರಾಗುತ್ತಿರುವ ಅಪಾಯಕ್ಕೆ ಸುಪ್ರೀಂ ಕೋರ್ಟ್ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.
ವಾದ...ಪ್ರತಿವಾದ...
ಯಾರೂ ಪ್ರಾಣಿಗಳನ್ನು ದ್ವೇಷಿಸುತ್ತಿಲ್ಲ. ಹಾವುಗಳಲ್ಲಿ 100ಕ್ಕೂ ಹೆಚ್ಚು ಪ್ರಬೇಧಗಳಿದ್ದು ಈ ಪೈಕಿ ನಾಲ್ಕು ಪ್ರಭೇದದ ಹಾವುಗಳು ಮಾತ್ರ ವಿಷಕಾರಿ. ಹಾಗಂತ ಹಾವುಗಳನ್ನು ಯಾರೂ ಮನೆಯಲ್ಲಿ ಸಾಕುವುದಿಲ್ಲ. ಅದೇ ರೀತಿ ನಾಯಿಗಳನ್ನು ಕೊಲ್ಲುವಂತೆಯೂ ಯಾರೂ ಹೇಳುವುದಿಲ್ಲ. ಅವುಗಳನ್ನು ಮಾನವ ವಾಸಸ್ಥಾನದಿಂದ ಬೇರ್ಪಡಿಸಬೇಕು ಎಂಬುದೇ ಜನರ ಬೇಡಿಕೆಯಾಗಿದೆ
–ತುಷಾರ್ ಮೆಹ್ತಾ ಸಾಲಿಸಿಟರ್ ಜನರಲ್
ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಏಕೆ ನೆರವೇರಿಸಿಲ್ಲ? ಅವುಗಳಿಗೆ ಸಾಕಷ್ಟು ಆಶ್ರಯತಾಣಗಳನ್ನು ಏಕೆ ನಿರ್ಮಿಸಿಲ್ಲ? ಈ ವಿಚಾರ ಗಂಭೀರವಾಗಿದ್ದು ವಿಸ್ತೃತವಾದ ವಾದ ಮಂಡನೆಗೆ ಅವಕಾಶ ನೀಡಬೇಕು. ದೆಹಲಿಯಲ್ಲಿ ಈಗಾಗಲೇ 700ರಷ್ಟು ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಲಾಗಿದೆ. ಅವು ಎಲ್ಲಿವೆ ಎಂಬುದು ದೇವರಿಗೇ ಗೊತ್ತು.
–ಕಪಿಲ್ ಸಿಬಲ್ ಅರ್ಜಿದಾರರ ಪರ ವಕೀಲ
ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕು ಎಂಬ ಉದ್ದೇಶವೇನೋ ಸರಿ. ಆದರೆ ಈ ವಿಚಾರದಲ್ಲಿ ಸಂಬಂಧಪಟ್ಟವರು ತಪ್ಪಾದ ಕ್ರಮಗಳನ್ನೇ ಕೈಗೊಳ್ಳುತ್ತಿದ್ದಾರೆ. ರೇಬೀಸ್‌ನಿಂದ ಜನರು ಸಾಯುತ್ತಿದ್ಧಾರೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಆದರೆ ಸಚಿವರು ಸದನದಲ್ಲಿ ನೀಡಿರುವ ಮಾಹಿತಿ ಪ್ರಕಾರ 2022ರಿಂದ 2025ರ ನಡುವೆ ದೆಹಲಿಯಲ್ಲಿ ರೇಬೀಸ್‌ನಿಂದಾಗಿ ಯಾರೂ ಮೃತಪಟ್ಟಿಲ್ಲ
–ಅಭಿಷೇಕ್ ಮನು ಸಿಂಘ್ವಿ ಅರ್ಜಿದಾರರ ಪರ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.