ADVERTISEMENT

ಬೀದಿ ನಾಯಿಗಳನ್ನು ನಿಗದಿಪಡಿಸಿದ ಆಶ್ರಯತಾಣಗಳಿಗೆ ಸ್ಥಳಾಂತರಿಸಿ: SC ನಿರ್ದೇಶನ

ಪಿಟಿಐ
Published 7 ನವೆಂಬರ್ 2025, 6:42 IST
Last Updated 7 ನವೆಂಬರ್ 2025, 6:42 IST
   

ನವದೆಹಲಿ: ಶೈಕ್ಷಣಿಕ ಕೇಂದ್ರಗಳು ಮತ್ತು ಆಸ್ಪತ್ರೆಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅಂಥ ನಾಯಿಗಳನ್ನು ನಿಗದಿಪಡಿಸಿದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಗುರುವಾರ ನಿರ್ದೇಶನ ನೀಡಿದೆ.

ನ್ಯಾ. ವಿಕ್ರಂ ನಾಥ್, ನ್ಯಾ. ಸಂದೀಪ್ ಮೆಹ್ತಾ ಹಾಗೂ ನ್ಯಾ. ಎನ್‌.ವಿ. ಅಂಜಾರಿಯಾ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ. ಜತೆಗೆ, ಬಿಡಾಡಿ ಜಾನುವಾರುಗಳ ಸಹಿತ ಇತರ ಪ್ರಾಣಿಗಳನ್ನು ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇನಿಂದ ತೆರವುಗೊಳಿಸುವಂತೆ ಮತ್ತು ಅವುಗಳನ್ನು ನಿಗದಿತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆಯೂ ಅಧಿಕಾರಿಗಳಿಗೆ ಪೀಠ ಆದೇಶಿಸಿದೆ. 

ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನೂ ಒಳಗೊಂಡಂತೆ ಬೀದಿ ನಾಯಿಗಳು ಪ್ರವೇಶಿಸುವುದನ್ನು ತಡೆಯಬೇಕು. ಇಂಥ ತಾಣಗಳಿಂದ ಹಿಡಿದು ತಂದ ನಾಯಿಗಳನ್ನು ಪುನಃ ಅದೇ ಸ್ಥಳದಲ್ಲಿ ಬಿಡಬಾರದು ಎಂದೂ ಪೀಠ ತಾಕೀತು ಮಾಡಿದೆ.

ADVERTISEMENT

ಬಿಡಾಡಿ ಪ್ರಾಣಿಗಳು ಹೆಚ್ಚಾಗಿ ಕಂಡುಬರುವ ಹೆದ್ದಾರಿಗಳನ್ನು ಗುರುತಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಿತ ವಿವಿಧ ಇಲಾಖೆಗಳು ಜಂಟಿಯಾಗಿ ಅಭಿಯಾನ ನಡೆಸುವಂತೆಯೂ ಸೂಚಿಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಜ. 13ಕ್ಕೆ ನಿಗದಿಪಡಿಸಿತು.

ಕೆಲ ಸಂಸ್ಥೆಗಳಲ್ಲಿರುವ ಬೀದಿ ನಾಯಿಗಳಿಗೆ ಅಲ್ಲಿನ ನೌಕರರೇ ಆಹಾರ ನೀಡಿ, ಬೆಂಬಲಿಸುವುದರಿಂದ ಉಂಟಾಗುತ್ತಿರುವ ನಾಯಿ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಅಪಾಯವನ್ನು ತಪ್ಪಿಸಲು ಮಧ್ಯಂತರ ಆದೇಶ ಹೊರಡಿಸುವುದಾಗಿ ನ. 3ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠ ಹೇಳಿತ್ತು. 

ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿ ಕಡಿತವು ವಿಶೇಷವಾಗಿ ಮಕ್ಕಳಲ್ಲಿ ರೇಬಿಸ್‌ ಪ್ರಕರಣಕ್ಕೆ ಕಾರಣವಾಗುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಜುಲೈ 28 ರಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನೂ ಪಕ್ಷಗಾರರನ್ನಾಗಿಸುವಂತೆಯೂ ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.