ADVERTISEMENT

ಬೀದಿ ನಾಯಿ ಪ್ರಕರಣ: ಖುದ್ದು ಹಾಜರಾಗಿ–ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್‌

ವಿಚಾರಣೆ | ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ

ಪಿಟಿಐ
Published 31 ಅಕ್ಟೋಬರ್ 2025, 14:51 IST
Last Updated 31 ಅಕ್ಟೋಬರ್ 2025, 14:51 IST
   

ನವದೆಹಲಿ: ‘ನ್ಯಾಯಾಲಯಗಳ ಆದೇಶಕ್ಕೆ ಗೌರವ ಇಲ್ಲವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ‘ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ನವೆಂಬರ್‌ 3ರಂದು ನಡೆಯುವ ಪ್ರಕರಣದ ವಿಚಾರಣೆಗೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಖುದ್ದು ಹಾಜರಿರಬೇಕು’ ಎಂದು ಶುಕ್ರವಾರ ಸೂಚಿಸಿದೆ.

ನವೆಂಬರ್‌ 3ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಹೊರತುಪಡಿಸಿ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ವಿನಾಯಿತಿ ನೀಡಲು ಈ ಹಿಂದೆಯೂ ನಿರಾಕರಿಸಿತ್ತು. ಈಗ, ಈ ಮಾತನ್ನು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ್‌ ಹಾಗೂ ಸಂದೀಪ ಮೆಹ್ತಾ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು.

ADVERTISEMENT

ಅಕ್ಟೋಬರ್‌ 22ರಂದು ನ್ಯಾಯಾಲಯ ನೀಡಿದ್ದ ಆದೇಶದನ್ವಯ ಕೆಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕ್ರಮ ಕೈಗೊಳ್ಳದಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಆದೇಶ ಪಾಲನೆ ಮಾಡಿರುವ ಕುರಿತು ಅಕ್ಟೋಬರ್‌ 27ರ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿತ್ತು. ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ದೆಹಲಿ ನಗರ ಪಾಲಿಕೆ ಮಾತ್ರ ಪ್ರಮಾಣಪತ್ರ ಸಲ್ಲಿಸಿವೆ’ ಎಂದು ನ್ಯಾಯಪೀಠ ಹೇಳಿತು.

ವಿಚಾರಣೆ ವೇಳೆ, ‘ನವೆಂಬರ್ 3ರಂದು ನಡೆಯುವ ವಿಚಾರಣೆಗೆ ಮುಖ್ಯ ಕಾರ್ಯದರ್ಶಿಗಳು ವರ್ಚುವಲ್‌ ಆಗಿ ಹಾಜರಾಗುವುದಕ್ಕೆ ಅನುಮತಿ ನೀಡಬೇಕು’ ಎಂದು ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ ಕೋರಿದರು.

ಆಗ, ‘ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ಹಾಜರಾಗಬೇಕು’ ಎಂದು ನ್ಯಾಯಮೂರ್ತಿ ವಿಕ್ರಮನಾಥ್‌ ಹೇಳಿದರು.

‘ನ್ಯಾಯಾಲಯದ ಆದೇಶಕ್ಕೆ ಗೌರವವೇ ಇಲ್ಲ. ಅವರು ಖುದ್ದು ಹಾಜರಾಗಿ, ಯಾಕೆ ಪ್ರಮಾಣಪತ್ರ ಸಲ್ಲಿಸಿಲ್ಲ ಎಂಬುದಕ್ಕೆ ವಿವರಣೆ ನೀಡಲಿ’ ಎಂದರು.

ಬೀದಿ ನಾಯಿಗಳ ಸಮಸ್ಯೆಯನ್ನು ರಾಜ್ಯ ಸರ್ಕಾರಗಳು ಪಾಲಿಕೆಗಳು ಬಗೆಹರಿಸಬೇಕು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ತನ್ನ ಸಮಯ ವ್ಯರ್ಥಮಾಡುತ್ತಿರುವುದು ದುರದೃಷ್ಟಕರ
ನ್ಯಾಯಮೂರ್ತಿ ವಿಕ್ರಮನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.