ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ನವದೆಹಲಿ: ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅಶ್ರಯತಾಣಗಳಿಗೆ ಕಳುಹಿಸುವಂತೆ ಈ ಹಿಂದೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ಇಂದು (ಶುಕ್ರವಾರ) ಆದೇಶದಲ್ಲಿ ಮಾರ್ಪಾಡು ಮಾಡಿದೆ
ಈ ಆದೇಶವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಸ್ವಾಗತಿಸಿದ್ದಾರೆ. ಇದು ಪ್ರಾಣಿಗಳ ಮತ್ತು ಸಾರ್ವಜನಿಕರ ಸುರಕ್ಷತೆಯ ನಿಟ್ಟಿನಲ್ಲಿ ತೆಗೆದುಕೊಂಡಿರುವ ಪ್ರಗತಿಪರ ಹೆಜ್ಜೆ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್‌ನ ಆದೇಶವು ಸಹಾನುಭೂತಿ ಮತ್ತು ವೈಜ್ಞಾನಿಕತೆಯಿಂದ ಕೂಡಿದೆ ಎಂದು ರಾಹುಲ್ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಮತ್ತು ಎನ್.ವಿ.ಅಂಜಾರಿಯಾ ಅವರಿದ್ದ ಪೀಠವು, ನಾಯಿಗಳಿಗೆ ಚಿಕಿತ್ಸೆ ನೀಡಿ, ಲಸಿಕೆ ಹಾಕಿ, ಸ್ಥಳಗಳಲ್ಲೇ ಬಿಡಬೇಕು ಎಂದು ಹೇಳಿದೆ.
ಆದಾಗ್ಯೂ, ಗಾಜಿಯಾಬಾದ್, ನೋಯ್ಡಾ, ಫರಿದಾಬಾದ್ ಮತ್ತು ಗುರುಗ್ರಾಮ್‌ನ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿಯಲು ಕೋರಿರುವ ನಿರ್ದೇಶನವನ್ನು ಪುರಸಭೆ ಅಧಿಕಾರಿಗಳು ಪಾಲಿಸುವುದನ್ನು ಮುಂದುವರಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರೇಬಿಸ್ ಇರುವ ಅಥವಾ ರೇಬಿಸ್‌ಗೆ ತುತ್ತಾಗಿದೆ ಎಂದು ಶಂಕಿಸಲಾಗಿರುವ ಹಾಗೂ ಕ್ರೂರವಾಗಿ ವರ್ತಿಸುವ ನಾಯಿಗಳ ಸ್ಥಳಾಂತರ ಇಲ್ಲ. ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್ 11ರಂದು ನೀಡಿದ್ದ ನಿರ್ದೇಶನವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಬೀದಿ ನಾಯಿಗಳಿಗೆ ಜನರು ಆಹಾರ ನೀಡಲು ಸ್ಥಳೀಯ ಅಧಿಕಾರಿಗಳು ಪ್ರತ್ಯೇಕವಾದ ಸ್ಥಳವನ್ನು ಗುರುತಿಸಬೇಕು ಎಂಬುದೂ ಸೇರಿದಂತೆ ಹತ್ತು ಪ್ರಮುಖ ಅಂಶಗಳನ್ನು ಸುಪ್ರೀಂ ಕೋರ್ಟ್ ಮಾರ್ಪಾಡು ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.