ADVERTISEMENT

ಹಾಪುಡ್‌ ಗುಂಪು ಹಲ್ಲೆ, ಹತ್ಯೆ ಪ್ರಕರಣ: ತುರ್ತು ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಅಕ್ರಮ ಗೋಸಾಗಾಟದ ಶಂಕೆಯಿಂದ ನಡೆದಿದ್ದ ಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 7:05 IST
Last Updated 8 ಆಗಸ್ಟ್ 2018, 7:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ಹಾಪುಡ್‌ ಜಿಲ್ಲೆಯಲ್ಲಿ ಮಾಂಸ ವ್ಯಾಪಾರಿಯ ಮೇಲೆ ನಡೆದಿದ್ದ ಗುಂಪು ಹಲ್ಲೆ, ಹತ್ಯೆ ಪ್ರಕರಣದ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ಆರೋಪಿ ಎನ್‌ಡಿಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ಈ ನಿರ್ಧಾರ ಪ್ರಕಟಿಸಿದೆ.

ಎನ್‌ಡಿಟಿವಿ ವರದಿ ಪ್ರಸಾರವಾದ ತಕ್ಷಣ ಸಂತ್ರಸ್ತರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರು. ಪ್ರಕರಣದ ವಿಚಾರಣೆಯನ್ನು ಸೋಮವಾರ ನಡೆಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸಮ್ಮತಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶದಿಂದ ಬೇರೆಡೆ ವರ್ಗಾಯಿಸಬೇಕು. ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕು. ಆರೋಪಿಗಳ ಜಾಮೀನನ್ನೂ ರದ್ದುಪಡಿಸಬೇಕು ಎಂದು ಸಂತ್ರಸ್ತರ ಪರ ವಕೀಲರು ಆಗ್ರಹಿಸಿದ್ದಾರೆ.

ಮಾಂಸದ ವ್ಯಾಪರಿ ಖಾಸಿಂ ಖುರೇಷಿ ಎಂಬುವವರನ್ನು ಅಕ್ರಮ ಗೋಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೂನ್ 18ರಂದು ಜನರ ಗುಂಪು ಹೊಡೆದು ಸಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ರಾಕೇಶ್ ಸಿಸೋಡಿಯಾ ಬಳಿ ತೆರಳಿದ್ದ ಎನ್‌ಡಿಟಿವಿ ತಂಡ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಆಗ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ.

ಹತ್ಯೆಯಲ್ಲಿ ತನ್ನ ಪಾತ್ರವಿಲ್ಲವೆಂದೂ ಘಟನೆ ನಡೆದ ಸ್ಥಳದಲ್ಲಿ ತಾನಿರಲೇ ಇಲ್ಲವೆಂದೂ ರಾಕೇಶ್ ಸಿಸೋಡಿಯಾ ನ್ಯಾಯಾಲಯಕ್ಕೆ ನೀಡಿದ ಲಿಖಿತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ. ಆದರೆ,‘ಅವರು ಗೋವನ್ನು ಕೊಂದರು, ನಾನು ಅವರನ್ನು ಕೊಂದೆ.ನನ್ನ ಸೇನೆ ಸಿದ್ಧವಾಗಿದೆ. ಯಾರಾದರೂ ಗೋವನ್ನು ಕೊಂದರೆ ಅವರನ್ನು ನಾವು ಹತ್ಯೆ ಮಾಡುತ್ತೇವೆ. ಸಾವಿರ ಬಾರಿ ಬೇಕಾದರೂ ಜೈಲಿಗೆ ಹೋಗುತ್ತೇವೆ. ಸರ್ಕಾರದ ನಿಲುವಿನಿಂದಾಗಿ ಪೊಲೀಸರೂ ನಮ್ಮ ಕಡೆಗಿದ್ದಾರೆ’ ಎಂದು ಎನ್‌ಡಿಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಹೇಳಿದ್ದ.

ಇದನ್ನೂ ಓದಿ

* ಅವರು ಗೋವನ್ನು ಕೊಂದರು, ನಾನು ಅವರನ್ನು ಕೊಂದೆ: ಎನ್‌ಡಿಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಆರೋಪಿ ಹೇಳಿಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT