ADVERTISEMENT

ಸಾಯಿಬಾಬಾ ಬಿಡುಗಡೆ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ನಕ್ಸಲರ ನಂಟು

ಪಿಟಿಐ
Published 15 ಅಕ್ಟೋಬರ್ 2022, 5:07 IST
Last Updated 15 ಅಕ್ಟೋಬರ್ 2022, 5:07 IST
ಜಿ.ಎನ್‌. ಸಾಯಿಬಾಬಾ (ಪಿಟಿಐ ಚಿತ್ರ)
ಜಿ.ಎನ್‌. ಸಾಯಿಬಾಬಾ (ಪಿಟಿಐ ಚಿತ್ರ)   

ಮುಂಬೈ:ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ, ಗಾಲಿಕುರ್ಚಿಯಲ್ಲಿರುವ ಜಿ.ಎನ್‌. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ, ತಕ್ಷಣ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಆದೇಶಿಸಿದೆ. ಈ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇಂದು (ಅಕ್ಟೋಬರ್‌ 15) ನಡೆಸಲಿದೆ.

ನ್ಯಾ. ಎಂ.ಆರ್‌. ಶಾ ಮತ್ತು ನ್ಯಾ. ಬೇಳ ಎಂ. ತ್ರಿವೇದಿ ಅವರು 11ಕ್ಕೆ ವಿಚಾರಣೆ ನಡೆಸಲಿದ್ದಾರೆ.

ಬಾಂಬೆ ಹೈಕೋರ್ಟ್‌ ಸಾಯಿಬಾಬಾ ಬಿಡುಗಡೆಗೆ ಆದೇಶಿಸುತ್ತಿದ್ದಂತೆ, ಮಹಾರಾಷ್ಟ್ರ ಸರ್ಕಾರವು ಆದೇಶಕ್ಕೆ ತಡೆ ನೀಡುವಂತೆ ಕೋರಿಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ,ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಶುಕ್ರವಾರ ನಿರಾಕರಿಸಿತ್ತು. ಆದಾಗ್ಯೂ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.

ADVERTISEMENT

ದೆಹಲಿ ವಿಶ್ವವಿದ್ಯಾಲಯದ ರಾಮ್‌ ಲಾಲ್‌ ಆನಂದ್‌ ಕಾಲೇಜ್‌ನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ಸಾಯಿಬಾಬಾ (55) ಅವರು ಈಗ ನಾಗಪುರ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಇತರ ಐವರನ್ನೂ ಖುಲಾಸೆ ಮಾಡಲಾಗಿದೆ.

ಮಾನವ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ ಸಾಯಿಬಾಬಾ ಅವರನ್ನು 2014ರ ಮೇ 9ರಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

ಸಾಯಿಬಾಬಾ ಮತ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಹೇಶ್‌ ಟಿರ್ಕಿ, ಪಾಂಡು ನರೋಟೆ, ಹೇಮ್‌ ಮಿಶ್ರಾ, ಪ್ರಶಾಂತ್‌ ರಾಹಿ ಮತ್ತು ವಿಜಯ ಟಿರ್ಕಿ ಅವರಿಗೆ 2017ರ ಮಾರ್ಚ್‌ 7ರಂದು ಗಡ್‌ಚಿರೋಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ನರೋಟೆ ಅವರು ಕೆಲ ಸಮಯದ ಹಿಂದೆ ಸೆರೆಮನೆಯಲ್ಲಿಯೇ ಮೃತಪಟ್ಟಿದ್ದಾರೆ.

ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯೂ ಭಾಗಿಯಾಗಿತ್ತು.

ನಿಷೇಧಿತ ಸಂಘಟನೆ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ (ಮಾವೋವಾದಿ) ರೆವಲ್ಯೂಷನರಿ ಡೆಮಾಕ್ರಟಿಕ್‌ ಫ್ರಂಟ್‌ನ (ಆರ್‌ಡಿಎಫ್‌) ಕಾರ್ಯದರ್ಶಿಯಾಗಿ ಸಾಯಿಬಾಬಾ ಅವರು ಕೆಲಸ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿಹೇಳಲಾಗಿತ್ತು.

ರಾಮ್‌ ಲಾಲ್‌ ಆನಂದ್‌ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕ ಹುದ್ದೆಯಿಂದ ಅವರನ್ನು 2021ರ ಏಪ್ರಿಲ್‌ನಲ್ಲಿ ವಜಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.