ADVERTISEMENT

ಭಾವಿ ಪತಿಯ ಕೊಲೆ: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಶುಭಾ ಶಂಕರ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಬಿ.ವಿ.ಗಿರೀಶ್‌ (ಭಾವಿ ಪತಿ) ಅವರನ್ನು ಗೆಳೆಯನ ಸಹಕಾರದಿಂದ ಕೊಲೆ ಮಾಡಿದ್ದಕ್ಕೆ ಶುಭಾ ಶಂಕರ್ ಹಾಗೂ ಇತರ ಮೂವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ. 

ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್‌ ಮತ್ತು ಅರವಿಂದ್ ಕುಮಾರ್ ಅವರ ಪೀಠವು, ‘ಶುಭಾ ತನ್ನ ಕಾಲೇಜು ಗೆಳೆಯ ಮತ್ತು ಇತರ ಇಬ್ಬರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು’ ಎಂದು ತೀರ್ಪಿನಲ್ಲಿ ಹೇಳಿತು. 

ADVERTISEMENT

ಹೈಕೋರ್ಟ್ ತೀರ್ಪಿನ ವಿರುದ್ಧ ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನು ಪೀಠ ವಜಾಗೊಳಿಸಿತು. ಅಪರಾಧಕ್ಕೆ ಕಾರಣವಾದ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಕುಸಿತದ ಬಗ್ಗೆ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು. 

‘ಬಲವಂತದ ಕೌಟುಂಬಿಕ ನಿರ್ಧಾರದಿಂದ ಮಹತ್ವಾಕಾಂಕ್ಷೆ ಹೊಂದಿದ್ದ ಯುವತಿಯ ಮನಸ್ಸಿನಲ್ಲಿ ಅತ್ಯಂತ ತೀವ್ರವಾದ ಗೊಂದಲ ಸೃಷ್ಟಿಸಿತು. ಮಾನಸಿಕ ಕ್ಷೋಭೆ ಮತ್ತು ಪ್ರಣಯದ ಅಪವಿತ್ರ ಮೈತ್ರಿಯಿಂದಾಗಿ ಮುಗ್ಧ ಯುವಕನ ಕೊಲೆಗೆ ಕಾರಣವಾಯಿತು. ಅದೇ ಸಮಯದಲ್ಲಿ ಇತರ ಮೂವರ ಜೀವನವೂ ಹಾಳಾಯಿತು’ ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ. 

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು ಸೆಕ್ಷನ್ 120 ಬಿ (ಪಿತೂರಿ) ಅಡಿಯಲ್ಲಿ ಕೊಲೆ ಆರೋಪದಡಿಯಲ್ಲಿ ಶುಭಾ, ಆಕೆಯ ಪ್ರಿಯಕರ ಅರುಣ್, ಸಹ ಆರೋಪಿಗಳಾದ ದಿನಕರನ್ ಮತ್ತು ವೆಂಕಟೇಶ್ ಅವರನ್ನು ದೋಷಿಗಳೆಂದು ಪ್ರಕಟಿಸಿದ ಹೈಕೋರ್ಟ್ ತೀರ್ಪನ್ನು ನ್ಯಾಯಪೀಠವು ದೃಢಪಡಿಸಿತು. ಸೆಕ್ಷನ್ 201ರ ಅಡಿಯಲ್ಲಿ ಸಾಕ್ಷ್ಯ ನಾಶ ಮಾಡಿದ್ದಕ್ಕಾಗಿ ಶುಭಾ ವಿರುದ್ಧ ಪ್ರತ್ಯೇಕ ಶಿಕ್ಷೆಯನ್ನು ಎತ್ತಿಹಿಡಿಯಿತು. 

ಆದಾಗ್ಯೂ, ಯುವತಿಯ ಮೇಲೆ ಹೇರಲಾದ ಬಲವಂತದ ವಿವಾಹವೇ ಅಪರಾಧಕ್ಕೆ ಕಾರಣ ಎಂಬುದನ್ನು ಗಮನಿಸಿರುವ ನ್ಯಾಯಾಲಯವು, ಘಟನೆಗೆ ಕಾರಣವಾದ ಸಂದರ್ಭವನ್ನು ಗಮನದಲ್ಲಿರಿಸಿಕೊಂಡು, ಅಪರಾಧಿ ಶುಭಾಳಿಗೆ ಕರ್ನಾಟಕ ರಾಜ್ಯಪಾಲರ ಮುಂದೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡಿತು. ಇದಕ್ಕೆ ಅರ್ಜಿ ಸಲ್ಲಿಸಲು ಎಂಟು ವಾರಗಳ ಕಾಲಾವಕಾಶವನ್ನು ಪೀಠ ನೀಡಿತು. 

ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯವು ನಾಲ್ವರಿಗೆ ಶಿಕ್ಷೆ ವಿಧಿಸಿತ್ತು. ಈ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. 

ಇಂಟೆಲ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ನಿಶ್ಚಿತಾರ್ಥವು 2023ರ ನವೆಂಬರ್‌ನಲ್ಲಿ ನಡೆದಿತ್ತು. ಅವರ ವಿವಾಹವು ಐದು ತಿಂಗಳಲ್ಲಿ ನಡೆಯಬೇಕಿತ್ತು. ಕಾನೂನು ಕಾಲೇಜಿನಲ್ಲಿ ತಮ್ಮ ಜೂನಿಯರ್ ಆಗಿದ್ದ ಅರುಣ್‌ನನ್ನು ಶುಭಾ ಪ್ರೀತಿಸುತ್ತಿದ್ದಳು. ಈ ಇಬ್ಬರೂ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾರೆಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. 

ಮಗಳ ಪ್ರೇಮ ಪ್ರಸಂಗವು ತಂದೆ ಶಂಕರನಾರಾಯಣ ಅವರಿಗೆ ಗೊತ್ತಾಯಿತು. ಇದನ್ನು ತಪ್ಪಿಸಲು ಬನಶಂಕರಿ ನಿವಾಸಿ ಗಿರೀಶ್‌ ಅವರೊಂದಿಗೆ ವಿವಾಹ ಮಾಡಲು ನಿಶ್ಚಯಿಸಿದರು. ಮದುವೆ ನಿಶ್ಚಯವಾದ ಬಳಿಕ ಗಿರೀಶ್ ಅವರೊಂದಿಗೆ ಊಟಕ್ಕೆ ತೆರಳಿದ್ದ ಶುಭಾ, ವಿಮಾನ ನಿಲ್ದಾಣದ ರಿಂಗ್ ರಸ್ತೆಯಲ್ಲಿ ವಿಮಾನ ಇಳಿಯುವುದನ್ನು ಹಾಗೂ ಮೇಲೇರುವುದನ್ನು ತೋರಿಸುತ್ತಿದ್ದಳು. ಈ ವೇಳೆ, ಉಳಿದ ಮೂವರು ಹಿಂದಿನಿಂದ ಬಂದು ಗಿರೀಶ್‌ ಮೇಲೆ ರಾಡ್‌ನಿಂದ ದಾಳಿ ಮಾಡಿದ್ದರು. ಗಿರೀಶ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೃತ್ಯಕ್ಕೆ ಮುನ್ನ ಉಳಿದ ಅಪರಾಧಿಗಳೊಂದಿಗೆ ಶುಭಾ ನಿರಂತರ ಸಂಪರ್ಕದಲ್ಲಿದ್ದರು. ಗಿರೀಶ್‌ ಓಡಾಟದ ಇಂಚಿಂಚು ಮಾಹಿತಿ ಒದಗಿಸಿದ್ದಳು. ಈ ಬಗ್ಗೆ ಸಿಡಿಆರ್ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 

‘ಒಬ್ಬ ಮುಗ್ಧ ಯುವಕ ಜೀವ ಕಳೆದುಕೊಳ್ಳಲು ಕಾರಣವಾದ ಆಕೆಯ ಕೃತ್ಯವನ್ನು ನಾವು ಕ್ಷಮಿಸಲು ಸಾಧ್ಯವಿಲ್ಲ. ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ಆಕೆ ತಪ್ಪು ಕೃತ್ಯ ಎಸಗಿದ್ದಾಳೆ. ಅಪರಾಧ ಸಂಭವಿಸಿ ಎರಡು ದಶಕಗಳು ಕಳೆದಿವೆ. ಘಟನೆಯ ಸಮಯದಲ್ಲಿ ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಹದಿಹರೆಯದವರು ಆಗಿದ್ದರು. ನ್ಯಾಯಾಲಯವು ಈ ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಬಯಸುತ್ತದೆ. ಆಕೆಗೆ ಹೊಸ ಜೀವನ ನಡೆಸಲು ಅವಕಾಶ ನೀಡುವ ಸಲುವಾಗಿ ಮಾತ್ರ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ’ ಎಂದು ಪೀಠದ ಪರವಾಗಿ ನ್ಯಾಯಮೂರ್ತಿ ಸುಂದರೇಶ್ ಅವರು 132 ಪುಟಗಳ ತೀರ್ಪಿನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.