ADVERTISEMENT

ಎಸ್‌ಸಿ/ಎಸ್‌ಟಿ ತಿದ್ದುಪಡಿ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:00 IST
Last Updated 10 ಫೆಬ್ರುವರಿ 2020, 19:00 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   
""

ನವದೆಹಲಿ: ಪರಿಶಿಷ್ಟ ಜಾತಿ, ಪಂಗಡಗಳ (ಮೇಲಿನ ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸುವ ಮುನ್ನ ಪೂರ್ವಭಾವಿ ವಿಚಾರಣೆ ನಡೆಸಬೇಕಿಲ್ಲ. ಹಾಗೆಯೇ ಆರೋಪಿಯನ್ನು ಬಂಧಿಸುವ ಮುನ್ನ ಮೇಲಧಿಕಾರಿಗಳ ಅನುಮತಿ ಪಡೆಯುವ ಅಗತ್ಯವೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ.

ಆದರೆ, ಕಾಯ್ದೆಯ ದುರ್ಬಳಕೆಯನ್ನು ತಪ್ಪಿಸುವುದಕ್ಕಾಗಿ ಅವಕಾಶವೊಂದನ್ನು ಸುಪ್ರೀಂ ಕೋರ್ಟ್‌ ಸೃಷ್ಟಿಸಿದೆ. ಕಾಯ್ದೆಯು ದುರ್ಬಳಕೆಯಾಗುತ್ತಿದೆ ಎಂದು ಮನವರಿಕೆಯಾದರೆ, ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‌ ಅನ್ನು ಹೈಕೋರ್ಟ್‌ಗಳು ರದ್ದು ಮಾಡಬಹುದು ಎಂದು ಹೇಳಿದೆ. ಆರೋಪವು ಹುಸಿ ಎಂದು ಮೇಲ್ನೋಟಕ್ಕೆ ಮನವರಿಕೆ ಆಗುವಂತಿದ್ದರೆ ಮಾತ್ರ ನಿರೀಕ್ಷಣಾ ಜಾಮೀನು ನೀಡಬಹುದು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

ನಿರೀಕ್ಷಣಾ ಜಾಮೀನಿನ ಅವಕಾಶವನ್ನು ಉದಾರವಾಗಿ ನೋಡುತ್ತಾ ಹೋದರೆ, ಕಾಯ್ದೆಯ ಉದ್ದೇಶವೇ ವಿಫಲವಾಗುತ್ತದೆ ಎಂಬ ಎಚ್ಚರಿಕೆಯ ಮಾತೂ ತೀರ್ಪಿನಲ್ಲಿ ಇದೆ.

ADVERTISEMENT

ಪರಿಶಿಷ್ಟ ಜಾತಿ, ಪಂಗಡಗಳ (ಮೇಲಿನ ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2018ರ ಸಾಂವಿಧಾನಿಕ ಮಾನ್ಯತೆಯನ್ನು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ವಿನೀತ್‌ ಶರಣ್‌ ಮತ್ತು ಎಸ್‌. ರವೀಂದ್ರ ಭಟ್‌ ಅವರ ಪೀಠವು ಎತ್ತಿ ಹಿಡಿಯಿತು.

ನ್ಯಾಯಮೂರ್ತಿ ಭಟ್‌ ಅವರು ಪ್ರತ್ಯೇಕ ತೀರ್ಪು ನೀಡಿದ್ದಾರೆ. ‘ಪ್ರತಿಯೊಬ್ಬರೂ ಸಹೋದರತ್ವದ ಭಾವವನ್ನು ತೋರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಜಾತಿಯ ಕಾರಣಕ್ಕಾಗಿಯೇ ಶೋಷಣೆಗೆ ಒಳಗಾಗುತ್ತಿದ್ದಾರೆ ಮತ್ತು ಪ್ರತ್ಯೇಕಗೊಳ್ಳುತ್ತಿದ್ದಾರೆ’ ಎಂದು ಈ ತೀರ್ಪಿನಲ್ಲಿ ಅವರು ಹೇಳಿದ್ದಾರೆ.

ಮುಖ್ಯ ತೀರ್ಪನ್ನು ತಮ್ಮ ಮತ್ತು ನ್ಯಾಯಮೂರ್ತಿ ಶರಣ್‌ ಅವರ ಪರವಾಗಿ ನ್ಯಾಯಮೂರ್ತಿ ಮಿಶ್ರಾ ಬರೆದಿದ್ದಾರೆ.ತಿದ್ದುಪಡಿ ಕಾಯ್ದೆಯ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

ಇನ್ನು ಕೇಂದ್ರ ಸರ್ಕಾರ ತಂದಿದ್ದ ತಿದ್ದುಪಡಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ್ದ ಕೋರ್ಟ್‌ ತೀರ್ಪನ್ನು ಫೆ.10ಕ್ಕೆ ಕಾದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದೆ.

2018ರ ತಿದ್ದುಪಡಿಯಲ್ಲೇನಿತ್ತು?

ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶವಿಲ್ಲ. ಇಂಥ ಪ್ರಕರಣಗಳಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಪ್ರಾಥಮಿಕ ತನಿಖೆ ಅಗತ್ಯವಿಲ್ಲ ಹಾಗೂ ಆರೋಪಿಗಳನ್ನು ಬಂಧಿಸಲು ಯಾವುದೇ ಅನುಮತಿ ಬೇಕಾಗಿಲ್ಲ ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು.

2018ರ ‘ಸುಪ್ರೀಂ’ ತೀರ್ಪೇನು?

ವ್ಯಕ್ತಿಗಳು ಹಾಗೂ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ಕಾಯ್ದೆಯ ದುರ್ಬಳಕೆ ಮಾಡಲಾಗುತ್ತಿದೆ. ಹಾಗಾಗಿ, ದೂರು ಸಲ್ಲಿಕೆ
ಯಾದ ತಕ್ಷಣವೇ ಆರೋಪಿಯನ್ನು ಬಂಧಿಸಬಾರದು ಮತ್ತು ಎಫ್‌ಐಆರ್‌ ದಾಖಲಿಸಬಾರದು. ಪೂರ್ವಭಾವಿ ತನಿಖೆ ನಡೆಸಬೇಕು ಹಾಗೂ ಆರೋಪಿಯ ಬಂಧನಕ್ಕೆ ಮುಂಚೆ ಮೇಲಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ 2018 ಮಾರ್ಚ್‌ 3ರಂದು ತೀರ್ಪು ನೀಡಿತ್ತು.

ತೀರ್ಪಿನಿಂದಾಗಿ ಕಾಯ್ದೆ ದುರ್ಬಲವಾಗಿದೆ ಎಂದು ಖಂಡಿಸಿ, ದೇಶದಾದ್ಯಂತ ಪ್ರತಿಭಟನೆಗಳು ನಡೆದು, ಘರ್ಷಣೆಯಲ್ಲಿ ಹಲವರು ಜೀವ ಕಳೆದುಕೊಂಡಿದ್ದರು. ಈ ಕಾರಣದಿಂದ, ಸುಪ್ರೀಂ ಕೋರ್ಟ್‌ ತೀರ್ಪನ್ನು ಅಸಿಂಧುಗೊಳಿಸಲು2018 ಆ.9ರಂದು ತಿದ್ದುಪಡಿ ಕಾಯ್ದೆಯನ್ನು ಸಂಸತ್‌ ಅಂಗೀಕರಿಸಿತ್ತು. ನಂತರದಲ್ಲಿ ಈ ತೀರ್ಪನ್ನು ಪುನರ್‌ಪರಿಶೀಲಿಸಲು ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹಾಗಾಗಿ, ಈ ತೀರ್ಪನ್ನು ಸುಪ್ರೀಂ ಕೋರ್ಟ್ ಹಿಂದಕ್ಕೆ ಪಡೆದಿತ್ತು. ಆದರೆ, ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಪಿಐಎಲ್‌ ಅರ್ಜಿಗಳು ಸಲ್ಲಿಕೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.