ADVERTISEMENT

ಮುಟ್ಟಿನ ಆರೋಗ್ಯವೂ ಹಕ್ಕು: ಸುಪ್ರೀಂ ಕೋರ್ಟ್‌ ಆದೇಶ

ಪಿಟಿಐ
Published 30 ಜನವರಿ 2026, 15:56 IST
Last Updated 30 ಜನವರಿ 2026, 15:56 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸಾರಿದೆ.

ಖಾಸಗಿ ಶಾಲೆಗಳನ್ನೂ ಒಳಗೊಂಡಂತೆ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮಣ್ಣಿನಲ್ಲಿ ಕರಗುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ನೀಡಬೇಕು. ವಿದ್ಯಾರ್ಥಿಗಳಿಗೆ ಲಿಂಗಾಧಾರಿತವಾಗಿ ಪ್ರತ್ಯೇಕವಾದ ಸ್ವಚ್ಛ ಶೌಚಾಲಯ ಸೌಲಭ್ಯವನ್ನು ಒದಗಿಸಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋರ್ಟ್‌ ನಿರ್ದೇಶನ ನೀಡಿದೆ.

ADVERTISEMENT

ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಮತ್ತು ಆರ್‌.ಮಹಾದೇವನ್‌ ಅವರಿದ್ದ ನ್ಯಾಯಪೀಠವು ಈ ಮಹತ್ವದ ತೀರ್ಪು ಪ್ರಕಟಿಸುವ ಮೂಲಕ, ಲಿಂಗ ಸಮಾನತೆ ಮತ್ತು ಶೈಕ್ಷಣಿಕ ಸಮಾನತೆಯನ್ನು ಎತ್ತಿಹಿಡಿದಿದೆ. ಈ ತೀರ್ಪು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಎಲ್ಲ ಶಾಲೆಗಳಿಗೂ ಅನ್ವಯವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ನ್ಯಾಯಾಲಯದ ಈ ತೀರ್ಪು ಸರಿಯಾಗಿ ಅನುಷ್ಠಾನಗೊಳ್ಳದಿದ್ದರೆ ಖಾಸಗಿ ಶಾಲೆಗಳ ಮಾನ್ಯತೆ ರದ್ದುಗೊಳಿಸುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸಂಸ್ಥೆಗಳಲ್ಲಿ  ತೀರ್ಪು ಪಾಲನೆಯಾಗದಿದ್ದಲ್ಲಿ, ಆಯಾ ರಾಜ್ಯ ಸರ್ಕಾರವನ್ನೇ ನೇರವಾಗಿ ಹೊಣೆ ಮಾಡಲಾಗುವುದು ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.

‘ಸಂವಿಧಾನದ 21ನೇ ವಿಧಿಯಲ್ಲಿ ಬರುವ ಜೀವಿಸುವ ಹಕ್ಕು, ಮುಟ್ಟಿನ ಆರೋಗ್ಯದ ಹಕ್ಕನ್ನೂ ಒಳಗೊಂಡಿದೆ. ಸುರಕ್ಷಿತ, ಪರಿಣಾಮಕಾರಿ ಮುಟ್ಟಿನ ನೈರ್ಮಲ್ಯ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ ಕಲ್ಪಿಸಬೇಕು ಎಂಬುದನ್ನು ಇದು ಸಾರುತ್ತದೆ. ಇಂಥ ಕ್ರಮಗಳಿಂದ ವಿದ್ಯಾರ್ಥಿನಿಯರು ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಆರೋಗ್ಯಕರ ಸಂತಾನೋತ್ಪತ್ತಿಯ ಹಕ್ಕಿನಲ್ಲಿ ಶಿಕ್ಷಣ ಮತ್ತು ಲೈಂಗಿಕ ಆರೋಗ್ಯದ ಕುರಿತ ಮಾಹಿತಿ ಪಡೆಯುವ ಹಕ್ಕೂ ಅಂತರ್ಗತವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಜೀವಿಸುವ ಮತ್ತು ಘನತೆಯ ಹಕ್ಕಿಗೆ ಶಿಕ್ಷಣದ ಹಕ್ಕು (ಆರ್‌ಟಿಇ) ವಿಶಾಲವಾದ ಚೌಕಟ್ಟನ್ನು ನೀಡುತ್ತದೆ. ಶಿಕ್ಷಣವನ್ನು ಪಡೆಯದೆ ಇವುಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿತು.

‘ಯಾವುದೇ ವ್ಯಕ್ತಿಯು ಅವಮಾನ, ಬಹಿಷ್ಕಾರ ಅಥವಾ ಪ್ರತ್ಯೇಕತೆಯ ನೋವು ಅನುಭವಿಸಬಾರದು. ಇಂಥ ವಿದ್ಯಮಾನಗಳು ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತವೆ. ಈ ಮಾತು ವಿದ್ಯಾರ್ಥಿನಿಯರಿಗೂ ಅನ್ವಯವಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯಕ್ಕೆ ಅಗತ್ಯವಿರುವ ಸೌಲಭ್ಯಗಳ ಅಲಭ್ಯತೆ ಕೂಡ ಅವರ ಘನತೆಯನ್ನು ಕುಗ್ಗಿಸುತ್ತದೆ’ ಎಂದು ನ್ಯಾಯಪೀಠ ಹೇಳಿತು.

‘ಖಾಸಗೀತನ ಮತ್ತು ಘನತೆ ಎರಡೂ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಖಾಸಗಿ ಹಕ್ಕಿನ ಉಲ್ಲಂಘನೆಯನ್ನು ತಡೆಯುವುದು ಮಾತ್ರವಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ಖಾಸಗೀತನದ ರಕ್ಷಣೆಯೂ ರಾಜ್ಯಗಳ ಹೊಣೆಯಾಗಿದೆ’ ಎಂದು ಅಭಿಪ್ರಾಯಪಟ್ಟಿತು.

‘ಮುಟ್ಟಿನ ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಸೌಲಭ್ಯಗಳು ಸಿಗದಿದ್ದಾಗ ಶಾಲಾ ಹಂತದಲ್ಲಿ ಕೂಡ ಬಾಲಕಿಯರು ಸಮಾನವಾಗಿ ಪಾಲ್ಗೊಳ್ಳುವ ಹಕ್ಕಿನಿಂದ ವಂಚಿತರಾಗುತ್ತಾರೆ. ಇದರ ಪರಿಣಾಮವಾಗಿ ಜೀವನದ ಮುಂದಿನ ಹಂತಗಳಲ್ಲೂ ಅಸಮರ್ಥತೆಯನ್ನು ಎದುರಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿತು.

‘ಸುಪ್ರೀಂ’ ನಿರ್ದೇಶನಗಳೇನು?

  • ಶೌಚಾಲಯದ ಆವರಣದ ಒಳಗೆ ಸ್ಯಾನಿಟರಿ ನ್ಯಾಪ್‌ಕಿನ್ ಸುಲಭವಾಗಿ ಲಭ್ಯವಾಗುವಂತೆ ಇರಬೇಕು. ವೆಂಡಿಂಗ್‌ ಯಂತ್ರದ ಮೂಲಕ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ನ್ಯಾಪ್‌ಕಿನ್‌ಗಳನ್ನು ಇಡಬಹುದು ಅಥವಾ ಗೊತ್ತುಪಡಿಸಿದ ಅಧಿಕಾರಿಯೂ ವಿತರಿಸಬಹುದು

  • ಪ್ರತಿಯೊಂದು ಶಾಲೆಯೂ ಲಿಂಗಾಧಾರಿತ ಶೌಚಾಲಯ ಸೌಲಭ್ಯ ಹೊಂದಿರಬೇಕು

  • ಈಗಾಗಲೇ ಅಸ್ತಿತ್ವದಲ್ಲಿರುವ ಅಥವಾ ಹೊಸದಾಗಿ ನಿರ್ಮಿಸುವ ಶೌಚಾಲಯಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಮತ್ತು ಅವರ ಖಾಸಗೀತನವನ್ನು ಕಾಪಾಡುವ ರೀತಿಯಲ್ಲಿ ವಿನ್ಯಾಸಗೊಳಿಸಬೇಕು/ ನಿರ್ಮಿಸಬೇಕು/ ನಿರ್ವಹಣೆ ಮಾಡಬೇಕು

  • ಶೌಚಾಲಯಗಳು ಅಂಗವಿಕಲ ಮಕ್ಕಳ ಅಗತ್ಯವನ್ನೂ ಪೂರೈಸುವಂತಿರಬೇಕು *ಶೌಚಾಲಯಗಳಲ್ಲಿ ಕೈ ತೊಳೆಯುವ ಸೋಪು ಮತ್ತು ಎಲ್ಲಾ ಸಮಯದಲ್ಲೂ ನೀರಿನ ಸೌಲಭ್ಯ ಇರಲೇಬೇಕು