ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗ ಪ್ರಕಟಿಸಿರುವ ಕರಡು ಮತದಾರರ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಿಸುವಂತೆ ಕೋರಿ ಆರ್‌ಜೆಡಿ ಮತ್ತು ಎಐಎಂಐಎಂ ಸಲ್ಲಿಸಿರುವ ಅರ್ಜಿಗಳನ್ನು ಸೆಪ್ಟೆಂಬರ್ 8ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭಾಗವಾಗಿ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 1 ಕಡೆಯ ದಿನ ಆಗಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ಅರ್ಜಿಗಳನ್ನು ಸೆಪ್ಟೆಂಬರ್ 8ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು. ಆರ್‌ಜೆಡಿ ಪರ ಹಾಜರಾದ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಶೋಯೆಬ್ ಆಲಂ ಅವರು, ಗಡುವು ವಿಸ್ತರಿಸುವಂತೆ ಕೋರಿ ಹಲವು ರಾಜಕೀಯ ಪಕ್ಷಗಳು ಅರ್ಜಿಗಳನ್ನು ಸಲ್ಲಿಸಿವೆ ಎಂದು ಪೀಠಕ್ಕೆ ತಿಳಿಸಿದರು.
‘ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೆ ಸುಮಾರು 1.75 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಆದ್ದರಿಂದ ಗಡುವನ್ನು ವಿಸ್ತರಿಸಬೇಕಾಗಿದೆ’ ಎಂದು ಅಲಂ ಅವರು ಪೀಠಕ್ಕೆ ತಿಳಿಸಿದರು.
‘ಗಡುವು ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಾಧ್ಯವಾದಷ್ಟು ಬೇಗ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ವಿನಂತಿಸುತ್ತಿದ್ದೇವೆ’ ಎಂದು ಹೇಳಿದರು.
‘ನಿಮ್ಮ ಸಮಸ್ಯೆ ಬಗೆಹರಿಸಲು ಚುನಾವಣಾ ಆಯೋಗವನ್ನು ಏಕೆ ಸಂಪರ್ಕಿಸಲಿಲ್ಲ’ ಎಂದು ಪೀಠವು ಅರ್ಜಿದಾರರನ್ನು ಕೇಳಿತು. ಅದಕ್ಕೆ ಪ್ರಶಾಂತ್ ಭೂಷಣ್, ‘ಆಯೋಗವನ್ನು ಸಂಪರ್ಕಿಸಿದ್ದೆವು. ಆದರೆ, ಅವರು ವಿನಂತಿಯನ್ನು ಪರಿಗಣಿಸಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.