ADVERTISEMENT

ಕಾಯಂ ನ್ಯಾಯಮೂರ್ತಿ ನೇಮಕ ಪ್ರಸ್ತಾವ ಹಿಂದಕ್ಕೆ

ವಿವಾದಕ್ಕೀಡಾಗಿದ್ದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲ ತೀರ್ಪುಗಳು

ಪಿಟಿಐ
Published 30 ಜನವರಿ 2021, 17:41 IST
Last Updated 30 ಜನವರಿ 2021, 17:41 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬಾಂಬೆ ಹೈಕೋ ರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರನ್ನು ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್‌ ಕೊಲಿಜಿಯಂ ಹಿಂಪಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ನ್ಯಾಯಮೂರ್ತಿ ಪುಷ್ಪಾ ಅವರು ತೀರ್ಪು ನೀಡುವ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯನ್ನು(ಪೊಕ್ಸೊ) ವ್ಯಾಖ್ಯಾನಿಸಿದ ರೀತಿ ವಿವಾದಕ್ಕೆ ಕಾರಣವಾಗಿ, ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಕಾಯಂ ನ್ಯಾಯಮೂರ್ತಿಯನ್ನಾಗಿ ಅವರನ್ನು ನೇಮಕ ಮಾಡುವ ಪ್ರಸ್ತಾವವನ್ನು ಹಿಂಪಡೆಯಲು ಇದೇ ಕಾರಣ ಎಂದು ಹೇಳಲಾಗುತ್ತಿದೆ.

ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ಕೊಲಿ ಜಿಯಂ ಜ.20ರಂದು, ಪುಷ್ಪಾ ಅವರನ್ನು ಕಾಯಂ ನ್ಯಾಯಮೂರ್ತಿ ಮಾಡುವ ಪ್ರಸ್ತಾವವನ್ನು ಅನುಮೋದಿಸಿತ್ತು. ನ್ಯಾಯ ಮೂರ್ತಿಗಳಾದ ಎನ್.ವಿ.ರಮಣ ಮತ್ತು ಆರ್.ಎಫ್‌.ನರಿಮನ್ ಅವರು ಕೊಲಿಜಿಯಂ ಸದಸ್ಯರು.

ADVERTISEMENT

ನಾಗಪುರ ನಿವಾಸಿ ಸತೀಶ್‌ ಎಂಬಾತ, 12 ವರ್ಷದ ಬಾಲಕಿಯನ್ನು ಮನೆಗೆ ಕರೆದಿದ್ದ. ಬಾಲಕಿಯ ಸ್ತನಗಳನ್ನು ಬಿಗಿಯಾಗಿ ಹಿಡಿದು, ಆಕೆಯ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದ್ದ ಎಂದು ಆರೋಪಿಸ ಲಾಗಿತ್ತು.

ಈ ಕುರಿತ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್‌, ಸತೀಶ್‌ಗೆ 3 ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ.

‘ಬಾಲಕಿಯ ಸ್ತನಗಳನ್ನು ಆಕೆಯ ಉಡುಪುಗಳ ಮೇಲಿನಿಂದ ಸ್ಪರ್ಶಿಸಿದರೆ, ಅದನ್ನು ಲೈಂಗಿಕ ದೌರ್ಜನ್ಯ ಎಂಬುದಾಗಿ ಪರಿಗಣಿಸಲಾಗದು. ಚರ್ಮದಿಂದ ಚರ್ಮದ ಸ್ಪರ್ಶವಾಗಿದ್ದರೆ ಮಾತ್ರ ಪೊಕ್ಸೊ ಅಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ’ ಎಂದು ನಾಗಪುರ ಪೀಠದ ನ್ಯಾಯಮೂರ್ತಿಯೂ ಆಗಿದ್ದ ಪುಷ್ಪಾ ಗನೇಡಿವಾಲಾ ಅಭಿಪ್ರಾಯಪಟ್ಟಿದ್ದರು. ಸೆಷನ್ಸ್‌ ಕೋರ್ಟ್‌ ನೀಡಿದ್ದ ಆದೇಶವನ್ನು ಪರಿಷ್ಕರಿಸಿ, ಆತನನ್ನು ಖುಲಾಸೆಗೊಳಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ‘5 ವರ್ಷದ ಬಾಲಕಿ ಕೈಹಿಡಿದು, ಆಕೆ ಎದುರು ಪ್ಯಾಂಟ್‌ನ ಜಿಪ್ ಬಿಚ್ಚುವುದು ಲೈಂಗಿಕ ದೌರ್ಜನ್ಯ ಆಗದು’ ಎಂದು ತೀರ್ಪು ನೀಡಿ, 50 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದರು.

ಮತ್ತೊಂದು ಪ್ರಕರಣ ದಲ್ಲಿ, ಬಾಲಕಿಯರ ಮೇಲೆ ಇಬ್ಬರು ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದರು. ‘ಸಂತ್ರಸ್ತ ಬಾಲಕಿಯರು ನೀಡಿರುವ ಹೇಳಿಕೆಗಳು ಆರೋಪಿಗಳ ವಿರುದ್ಧ ಕ್ರಿಮಿನಲ್‌ ಅಪರಾಧ ನಿಗದಿ ಮಾಡಲು ಪ್ರೇರೇಪಣೆ ನೀಡುವುದಿಲ್ಲ’ ಎಂದು ಹೇಳಿದ್ದ ನ್ಯಾಯಮೂರ್ತಿ ಪುಷ್ಪಾ ಅವರು, ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ್ದರು.

ಪುಷ್ಪಾ ಅವರು ಜಿಲ್ಲಾ ನ್ಯಾಯಾ ಧೀಶರಾಗಿ 2007ರಲ್ಲಿ ನೇರ ನೇಮಕಾತಿ ಹೊಂದಿದ್ದು, ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2019ರಲ್ಲಿ ಬಡ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.