ADVERTISEMENT

ಸರ್ಜಿಕಲ್ ಗೆ 2 ವರ್ಷ: ಪಿಒಕೆಯಲ್ಲಿ ಮತ್ತೆ ಚುರುಕಾಗಿವೆ ಉಗ್ರರ ನೆಲೆಗಳು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 13:20 IST
Last Updated 28 ಸೆಪ್ಟೆಂಬರ್ 2018, 13:20 IST
   

ಶ್ರೀನಗರ: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದ ಜೊತೆ ಶಾಂತಿ ಮಾತುಕತೆಗೆ ಮುಂದಾಗಿರುವ ಬೆನ್ನಲೆ 250ಕ್ಕೂ ಹೆಚ್ಚು ಉಗ್ರರು ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನೆಲೆ ನಿಂತಿದ್ದು ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಕಾಶ್ಮೀರದ ’ಉರಿ’ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ ಬಳಿಕ ಭಾರತೀಯ ಸೇನೆ 2016ರ ಸೆಪ್ಟೆಂಬರ್ ನಲ್ಲಿ ಪಾಕ್‌ ನೆಲದಲ್ಲಿ ನಿರ್ದಿಷ್ಟದಾಳಿ ನಡೆಸಿ ಸುಮಾರು 30ಕ್ಕೂ ಹೆಚ್ಚು ಉಗ್ರರ ಹಡಗು ತಾಣಗಳನ್ನು ನಾಶಪಡಿಸಿತ್ತು. ಇದೀಗ ಸೇನೆ ದಾಳಿ ಮಾಡಿದ್ದ ನೆಲೆಗಳಲ್ಲಿ 250ಕ್ಕೂ ಹೆಚ್ಚು ಉಗ್ರರು ಸಕ್ರಿಯರಾಗಿದ್ದು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮಾವೇಶದ ವೇಳೆ ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನದೊಂದಿಗೆ ಭಾರತ ಶಾಂತಿ ಮಾತುಕತೆಯಲ್ಲಿ ಭಾಗವಹಿಸಬೇಕಿತ್ತು. ಕಳೆದವಾರ ಕಾಶ್ಮೀರದಲ್ಲಿ ಹಿಜಾಬುಲ್ ಮುಜಾಯಿದ್ದೀನ್‌ ಉಗ್ರರು ಮೂವರು ಪೊಲೀಸರನ್ನು ಹತ್ಯೆ ಮಾಡಿದ್ದರಿಂದ ಭಾರತ ಈ ಮಾತುಕತೆಯಿಂದ ಹಿಂದೆ ಸರಿದಿತ್ತು.

ADVERTISEMENT

2016ರ ಜುಲೈನಲ್ಲಿ ಹಿಜಾಬುಲ್‌ ಕಮಾಂಡರ್ ಬ್ರುಹಾನ್‌ ವಾನಿ ಹತ್ಯೆ ಬಳಿಕ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ದ ವಾತಾವರಣ ಮುಂದುವರೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣಗಳು ನಿತ್ಯವೂ ನಡೆಯುತ್ತಿವೆ. ಬ್ರುಹಾನ್‌ ವಾನಿ ಹತ್ಯೆಗೂ ಮುಂಚೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 15 ಉಗ್ರರ ನೆಲೆಗಳು ಸಕ್ರಿಯವಾಗಿದ್ದವು. ಆಗ 150 ಉಗ್ರರು ನೆಲೆಸಿದ್ದರು. ಬ್ರುಹಾನ್‌ ವಾನಿ ಹತ್ಯೆ ಬಳಿಕ 27ಕ್ಕೂ ಹೆಚ್ಚು ಉಗ್ರರ ನೆಲಗಳು ನಿರ್ಮಾಣವಾಗಿವೆ, ಇದಕ್ಕೆ ಪಾಕಿಸ್ತಾನ ಸೇನೆಯ ಕುಮ್ಮಕ್ಕು ಇದೇ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

ಸಕ್ರಿಯವಾಗಿರುವ 27 ಉಗ್ರರ ನೆಲೆಗಳು ಎಲ್‌ಇಟಿ ಮತ್ತು ಹಿಜಾಬುಲ್‌ ಸಂಘಟನೆಗಳ ಹಿಡಿತದಲ್ಲಿವೆ. ಲಿಪ್ಪಿ ಕಣಿವೆ, ಬಾರಾಕೋಟ್‌, ಕಥುವಾ, ಚಕೋತಿ, ಜುರಾ, ಶಾರ್ಡಿ, ಹಾಜಿಪುರ ಪ್ರದೇಶಗಳಲ್ಲಿನ 27 ಅಡಗುತಾಣಗಳಲ್ಲಿ 250ಕ್ಕೂ ಹೆಚ್ಚು ಉಗ್ರರು ಸಕ್ರಿಯರಾಗಿದ್ದು, ಗಡಿಯೊಳಗೆ ನುಸುಳಲು ಹವಣಿಸುತ್ತಿದ್ದಾರೆ. ಹಾಗೇ ಗಡಿಯ ಚೆಕ್‌ ಪೋಸ್ಟ್‌ಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ.

ಗುಪ್ತಚರ ಮೂಲಗಳ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಸೇನೆ ಗಡಿ ಉದ್ದಕ್ಕೂ ಕಟ್ಟೆಚ್ಚರ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.