ADVERTISEMENT

ಅರವಿಂದ್ ಕೇಜ್ರಿವಾಲ್ 'ಚೋಟಾ ಮೋದಿ': ರಣದೀಪ್ ಸುರ್ಜೇವಾಲ ಟೀಕೆ

ಪಿಟಿಐ
Published 3 ಫೆಬ್ರುವರಿ 2022, 14:48 IST
Last Updated 3 ಫೆಬ್ರುವರಿ 2022, 14:48 IST
ರಣದೀಪ್ ಸುರ್ಜೇವಾಲ
ರಣದೀಪ್ ಸುರ್ಜೇವಾಲ   

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ 'ಚೋಟಾ ಮೋದಿ' ಆಗಿದ್ದು, ಬಿಜೆಪಿ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ತದ್ರೂಪಿ ಆಗಿರುವ ಕೇಜ್ರಿವಾಲ್, ಅವರದ್ದೇ ನಡವಳಿಕೆ ಹಾಗೂ ಸರ್ವಾಧಿಕಾರ ಧೋರಣೆಯನ್ನು ಹೊಂದಿದ್ದಾರೆ ಎಂದು ಟೀಕಿಸಿದರು.

ಕೇಜ್ರಿವಾಲ್ ಒಬ್ಬ ವೇಷಧಾರಿ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ಗೋವಾ ಹಾಗೂ ಉತ್ತರಾಖಂಡದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಜೆಪಿಗೆ ಕಿಡಿ ಹೊತ್ತಿಸಿಕೊಳ್ಳಲು ನೆರವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಎಲ್ಲೆಲ್ಲಿ ನೆಲೆ ಕಳೆದುಕೊಳ್ಳುತ್ತಿದೆಯೋ ಅಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಹಾಗೂ ಹೈದರಾಬಾದ್ ಮೂಲದ ಎಐಎಂಐಎಂ ರಕ್ಷಣೆಗೆ ಬರುತ್ತಿವೆ ಎಂದು ಹೇಳಿದರು.

ಅವರು (ಕೇಜ್ರಿವಾಲ್) ಬಿಜೆಪಿಯನ್ನು ವಿರೋಧಿಸುತ್ತಿರುವಂತೆಯೇ ತೋರುತ್ತಿದೆ. ಆದರೆ ಅಂತಿಮವಾಗಿ ಬಿಜೆಪಿ ನೆರವಿನಿಂದ ಸರ್ಕಾರ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಅನೇಕ ಹಗರಣಗಳು ನಡೆದಿವೆ. ಅವುಗಳ ಪೈಕಿ ಶೇ 10ರಷ್ಟು ತನಿಖೆ ನಡೆದರೆ ಅವರು ಸರ್ಕಾರ ನಡೆಸಲು ಸಾಧ್ಯವಿಲ್ಲ. ಜೈಲಿನಲ್ಲಿ ಕಂಬಿಗಳನ್ನು ಎಣಿಸುತ್ತಿದ್ದರು ಎಂದು ಆರೋಪಿಸಿದರು.

ಕೇಜ್ರಿವಾಲ್ ಅವರು 'ಲೋಕಾಯುಕ್ತ' ಮತ್ತು 'ಲೋಕಪಾಲ' ಮೇಲೆ ಪ್ರಮಾಣ ಮಾಡಿದ ವ್ಯಕ್ತಿ. ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ವ್ಯಕ್ತಿ. ಈಗ 'ಲೋಕಪಾಲ' ಎಲ್ಲಿದೆ ? ಎಲ್ಲಿ ಹೋಗಿದೆ ? ಅರವಿಂದ್ ಕೇಜ್ರಿವಾಲ್ ಲೋಕಪಾಲ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.