ADVERTISEMENT

ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಗೋವಾದ ಹೋಟೆಲ್ ಮಾಲೀಕನ ವಿಚಾರಣೆ

ತನಿಖೆ ಮುಂದುವರಿಸಿದ ಎನ್‌ಸಿಬಿ

ಪಿಟಿಐ
Published 31 ಆಗಸ್ಟ್ 2020, 11:00 IST
Last Updated 31 ಆಗಸ್ಟ್ 2020, 11:00 IST
ಸುಶಾಂತ್ ಸಿಂಗ್
ಸುಶಾಂತ್ ಸಿಂಗ್   

ಮುಂಬೈ: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಗೋವಾದ ಹೋಟೆಲ್ ಮಾಲೀಕ ಗೌರವ್ ಆರ್ಯ ಎಂಬುವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ವಿಚಾರಣೆಗೊಳಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರ್ಯ ತಮ್ಮ ಕಾನೂನು ತಂಡದೊಂದಿಗೆ ಇಲ್ಲಿನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಕೇಂದ್ರ ತನಿಖಾ ಸಂಸ್ಥೆಗೆ ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ಬಂದರು.

ಸುಶಾಂತ್ ಸಿಂಗ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ರಿಯಾ ಚಕ್ರವರ್ತಿ 2017ರಲ್ಲಿ ಗೌರವ್ ಆರ್ಯ ಅವರಿಗೆ ಮೊಬೈಲ್‌ನಲ್ಲಿ ಕೆಲವು ಸಂದೇಶಗಳನ್ನು ಕಳುಹಿಸಿದ್ದರು. ಇದರ ಆಧಾರದ ಮೇರೆಗೆ ಗೌರವ್ ಅವರಿಗೆ ತನಿಖೆಗೆ ಹಾಜರಾಗುವಂತೆ ಇ.ಡಿ ಕಳೆದ ವಾರ ಸಮನ್ಸ್ ನೀಡಿತ್ತು. ತನಿಖೆ ವೇಳೆ ಗೌರವ್ ಅವರೊಂದಿಗೆ ಕೆಲ ನಿಷೇಧಿತ ಮಾದಕ ವಸ್ತುಗಳ ಕುರಿತೂ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಸಿಬಿಐ ತನ್ನ ಹೇಳಿಕೆಯನ್ನು ದಾಖಲಿಸಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಗೌರವ್ ಆರ್ಯ ಗೋವಾದಲ್ಲಿ ಎರಡು ಹೋಟೆಲ್‌ಗಳನ್ನು ನಡೆಸುತ್ತಿದ್ದು, ತಾನು ಎಂದಿಗೂ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ವ್ಯವಹಾರ ನಡೆಸಿಲ್ಲ. ನನ್ನ ಮತ್ತು ರಿಯಾ ನಡುವೆ ಮೂರು ವರ್ಷಗಳ ಹಿಂದೆ ನಡೆದ ಸಂವಹನವೇ ಕೊನೆಯದು.ಈ ನಿಟ್ಟಿನಲ್ಲಿ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ಸುದ್ದಿವಾಹಿನಿಗಳಿಗೆ ತಿಳಿಸಿದ್ದರು.

ಅಲ್ಲದೆ ನಟ ಸುಶಾಂತ್ ಸಿಂಗ್ ಅವರನ್ನು ‘ನಾನು ಎಂದಿಗೂ ಭೇಟಿಯೇ ಆಗಿಲ್ಲ’ ಎಂದೂ ಗೌರವ್ ಆರ್ಯ ಸ್ಪಷ್ಟಪಡಿಸಿದ್ದರು.

ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಅಕ್ರಮ ಹಣ ವರ್ಗಾವಣೆ ಕೋನದಿಂದ ಪರಿಶೀಲಿಸಲಾಗುತ್ತಿದೆ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಎಲ್ಲಾ ಸಂಭಾಷಣೆಗಳನ್ನು ಆಲಿಸಿ, ಸತ್ಯ ಏನೆಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಯಾವುದಾದರೂ ಅಪರಾಧ ನಡೆದಿದೆಯೇ ಎಂಬುದನ್ನೂ ಪರಿಶೀಲಿಸಬೇಕಿದೆ ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಿಯಾ ನಾಲ್ಕನೇ ಬಾರಿ ವಿಚಾರಣೆ: ಸುಶಾಂತ್ ಸಿಂಗ್ ಜತೆ ಕೆಲಸ ಮಾಡಿದ್ದ ಇತರ ನಾಲ್ವರು ಸೇರಿದಂತೆ ರಿಯಾ ಚಕ್ರವರ್ತಿಯನ್ನೂ ಸಿಬಿಐ ಸೋಮವಾರ ನಾಲ್ಕನೇ ಬಾರಿ ವಿಚಾರಣೆ ನಡೆಸಿತು.

ಜಾರಿ ನಿರ್ದೇಶನಾಲಯವು ಈಗಾಗಲೇ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ರಿಯಾಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ರಿಯಾಳ ಎರಡು ಫೋನ್‌ಗಳಲ್ಲಿ ಡ್ರಗ್ಸ್‌ಗೆ ಸಂಬಂಧಿಸಿದ ಸಂದೇಶಗಳು ಒಂದೇ ಆಗಿವೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಹಾಗೂ ಇಬ್ಬರು ಸಹೋದರಿಯನ್ನೂ ಇ.ಡಿ ವಿಚಾರಣೆಗೊಳಪಡಿಸಿದೆ. ಸುಶಾಂತ್ ಮತ್ತು ರಿಯಾ ಜತೆಗೆ ನಂಟು ಹೊಂದಿರುವ ಕೆಲ ಮಂದಿಯನ್ನೂ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.