ADVERTISEMENT

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಬೆಂಗಳೂರಲ್ಲಿ ಸೆರೆ

ಏಜೆನ್ಸೀಸ್
Published 12 ಜುಲೈ 2020, 1:09 IST
Last Updated 12 ಜುಲೈ 2020, 1:09 IST
ಸ್ವಪ್ನಾ ಸುರೇಶ್ (ಟ್ವಿಟರ್‌ ಚಿತ್ರ)
ಸ್ವಪ್ನಾ ಸುರೇಶ್ (ಟ್ವಿಟರ್‌ ಚಿತ್ರ)   

ಬೆಂಗಳೂರು: ಕೇರಳದಲ್ಲಿ ಇತ್ತೀಚೆಗೆ ಬಯಲಾಗಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್ ಎಂಬುವವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕೊಚ್ಚಿಯಲ್ಲಿರುವ ಎನ್‌ಐಎ ಕಚೇರಿಗೆ ನಾಳೆ ಸ್ವಪ್ನಾ ಹಾಗೂ ಸಂದೀಪ್‌ ಅವರನ್ನು ಹಾಜರುಪಡಿಸಲಾಗುತ್ತದೆ.

ಇತ್ತೀಚೆಗೆ ತಿರುವನಾಥಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ರಾಜತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಬ್ಯಾಗೇಜ್‌ಗಳ ಜೊತೆಗೆ ಗುಟ್ಟಾಗಿ 30 ಕೆ.ಜಿ. ಚಿನ್ನವನ್ನು ಸಾಗಿಸಲಾಗುತ್ತಿತ್ತು. ಕಳ್ಳ ಮಾರ್ಗದಲ್ಲಿ ಸಾಗಿಸಲಾಗುತ್ತಿದ್ದ ಚಿನ್ನವನ್ನು ವಿಮಾನ ನಿಲ್ದಾಣ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ADVERTISEMENT

ಈ ಪ್ರಕರಣವನ್ನು ಕೇಂದ್ರಸರ್ಕಾರ ಎನ್‌ಐಎಗೆ ವಹಿಸಿದೆ. ಪ್ರಕರಣದಲ್ಲಿ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಪ್ರಮುಖ ಆರೋಪಿಗಳಾಗಿದ್ದು, ಎನ್‌ಐಎ ಒಟ್ಟು ನಾಲ್ವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿದೆ. ಅಂದಿನಿಂದಲೂ ಈ ಇಬ್ಬರೂ‌ ತಲೆಮರೆಸಿಕೊಂಡಿದ್ದರು.

ರಾಜತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಬ್ಯಾಗೇಜ್‌ಗಳ ಮೂಲಕ ಚಿನ್ನದ ಕಳ್ಳ ಸಾಗಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಪ್ರಕರಣದ ಪರಿಣಾಮಕಾರಿ ತನಿಖೆಗೆ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರವನ್ನೂ ಬರೆದಿದ್ದರು.

ಆರೋಪಿಗಳು ಉಗ್ರರಿಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಶಂಕಿಸಲಾಗಿದೆ.

ಕೇರಳ ಹೈಕೋರ್ಟ್‌ನಲ್ಲಿ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಎನ್‌ಐಎ ಹಾಗೂ ಕಸ್ಟಮ್ಸ್‌ ಇಲಾಖೆ ಜಂಟಿಯಾಗಿ ವಿರೋಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.