ADVERTISEMENT

ತಬ್ಲೀಗ್‌ ಜಮಾತ್‌: 85 ಕಿರ್ಗಿಸ್ತಾನ್‌ ಪ್ರಜೆಗಳಿಗೆ ಜಾಮೀನು

ಪಿಟಿಐ
Published 13 ಜುಲೈ 2020, 13:23 IST
Last Updated 13 ಜುಲೈ 2020, 13:23 IST
ದೆಹಲಿಯಲ್ಲಿ ತಬ್ಲೀಗ್‌ ಜಮಾತ್‌ ನಡೆದಿದ್ದ ನಿಜಾಮುದ್ದೀನ್‌ ಪ್ರದೇಶ. 
ದೆಹಲಿಯಲ್ಲಿ ತಬ್ಲೀಗ್‌ ಜಮಾತ್‌ ನಡೆದಿದ್ದ ನಿಜಾಮುದ್ದೀನ್‌ ಪ್ರದೇಶ.    

ನವದೆಹಲಿ: ಕೋವಿಡ್‌–19 ಲಾಕ್‌ಡೌನ್‌ ನಡುವೆದೆಹಲಿಯಲ್ಲಿ ನಡೆದಿದ್ದ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿ ಸರ್ಕಾರದ ಮಾರ್ಗಸೂಚಿ, ಸೆಕ್ಷನ್‌ 144 ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ 85 ಕಿರ್ಗಿಸ್ತಾನ್‌ ಪ್ರಜೆಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ತಲಾ ₹ 10 ಸಾವಿರ ವೈಯಕ್ತಿಕ ಬಾಂಡ್‌ ಸಲ್ಲಿಸಲು ಆದೇಶಿಸಿ,ಮೆಟ್ರೊಪಾಲಿಟನ್ (ಮಹಾನಗರ)‌ ಮುಖ್ಯ ಮ್ಯಾಜಿಸ್ಟ್ರೇಟ್‌ ಗುರ್‌ಮೋಹಿನ ಕೌರ್ ಜಾಮೀನು ಮಂಜೂರು ಮಾಡಿದ್ದಾರೆ. ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ವಿದೇಶಿ ಪ್ರಜೆಗಳು ವಿಚಾರಣೆಯಲ್ಲಿ ಭಾಗವಹಿಸಿದ್ದರು.

ಮತ್ತೊಮ್ಮೆ ಅರ್ಜಿ: ಸೋಮವಾರ ಜಾಮೀನು ಪಡೆದಿರುವ ಆರೋಪಿಗಳು, ಶಿಕ್ಷೆ ಪ್ರಮಾಣ ಕಡಿಮೆಗೊಳಿಸುವಂತೆ ಕೋರಿ ಮಂಗಳವಾರ ಮತ್ತೊಮ್ಮೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಆರೋಪಿಗಳ ಪರ ವಕೀಲರಾದ ಅಶಿಮ ಮಂಡ್ಲ, ಮಂದಾಕಿನಿ ಸಿಂಗ್‌ ಹಾಗೂ ಫಾಹಿಮ್‌ ಖಾನ್‌ ತಿಳಿಸಿದರು. ಆರೋಪಿಗಳ ಮೇಲೆ ದಾಖಲಿಸಲಾಗಿರುವ ಪ್ರಕರಣಗಳಲ್ಲಿ ಹಲವು ಪ‍್ರಕರಣಗಳು ಕನಿಷ್ಠ ಆರು ತಿಂಗಳಿಂದ ಗರಿಷ್ಠ ಎಂಟು ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು. ಈಗಾಗಲೇ ಸರ್ಕಾರ ಇವರ ವೀಸಾವನ್ನು ರದ್ದುಗೊಳಿಸಿದ್ದು, ಕಪ್ಪುಪಟ್ಟಿಗೆ ಸೇರಿಸಿದೆ.

ADVERTISEMENT

ಜೂನ್‌ನಲ್ಲಿ 36 ದೇಶಗಳ 956 ವಿದೇಶಿ ಪ್ರಜೆಗಳ ಮೇಲೆ 59 ಆರೋಪಪಟ್ಟಿಯನ್ನು ಪೊಲೀಸರು ದಾಖಲಿಸಿದ್ದರು. ಈ ಪೈಕಿಇಲ್ಲಿಯವರೆಗೂ ಪ್ರಕರಣದ ಆರೋಪಪಟ್ಟಿಯಲ್ಲಿದ್ದ 34 ದೇಶಗಳ 532 ಪ್ರಜೆಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಕೊರೊನಾ ಪ್ರಕರಣಗಳು ಏರಿಕೆ:ಮಾರ್ಚ್‌ನಲ್ಲಿ ನಡೆದ ತಬ್ಲೀಗ್‌ ಜಮಾತ್‌ ಧಾರ್ಮಿಕಸಭೆಯಲ್ಲಿ ಭಾರತದ ವಿವಿಧ ಭಾಗದ ಮತ್ತು ವಿವಿಧ ದೇಶಗಳ 9 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಸದಸ್ಯರಲ್ಲಿ ಕೋವಿಡ್‌–19 ದೃಢಪಟ್ಟ ಕಾರಣ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು. ಈ ಪೈಕಿ 956 ವಿದೇಶಿ ಪ್ರಜೆಗಳು ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿತ್ತು.

₹10 ಸಾವಿರ ದಂಡ ಕಟ್ಟಲು ಸೂಚನೆ:ಕೋವಿಡ್‌–19 ಲಾಕ್‌ಡೌನ್‌ ನಡುವೆ ದೆಹಲಿಯಲ್ಲಿ ನಡೆದಿದ್ದ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿ ಸರ್ಕಾರದ ಮಾರ್ಗಸೂಚಿ, ಸೆಕ್ಷನ್‌ 144 ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ 14 ದೇಶಗಳ ಪ್ರಜೆಗಳಿಗೆ ತಲಾ ₹10 ಸಾವಿರ ದಂಡ ಪಾವತಿಸಲು ನವದೆಹಲಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಿಮಾಂಶು ಅವರು ಆದೇಶಿಸಿದ್ದಾರೆ.

ಅಲ್ಜೀರಿಯಾ, ಬೆಲ್ಜಿಯಂ, ಬ್ರಿಟನ್‌, ಈಜಿಪ್ಟ್‌, ಫಿಲಿಪ್ಪೀನ್ಸ್‌ನ ಪ್ರಜೆಗಳು ದಂಡ ಪಾವತಿಸಿದ ನಂತರದಲ್ಲಿ ಪ್ರಕರಣವನ್ನು ಹಿಂಪಡೆಯಲಾಗುವುದು ಎಂದು ಹಿಮಾಂಶು ಅವರು ಆದೇಶಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸುಡಾನ್‌ ದೇಶದ ಐವರು ಪ್ರಜೆಗಳಿಗೆ ತಲಾ ₹5 ಸಾವಿರ ದಂಡ ಪಾವತಿಸಲು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆಶಿಶ್‌ ಗುಪ್ತಾ ಆದೇಶಿಸಿದ್ದಾರೆ.

ಚೀನಾ, ಮೊರಾಕೊ, ಉಕ್ರೇನ್‌, ಇಥಿಯೊಪಿಯಾ, ಫಿಜಿ, ಆಸ್ಟ್ರೇಲಿಯಾ, ಬ್ರೆಜಿಲ್‌ ದೇಶದ ಪ್ರಜೆಗಳಿಗೆ ತಲಾ ₹5 ಸಾವಿರ ದಂಡ ವಿಧಿಸಿ ಮ್ಯಾಜಿಸ್ಟ್ರೇಟ್‌ ಪಾರಸ್‌ ದಲಾಲ್‌ ಆದೇಶಿಸಿದ್ದಾರೆ. ದಂಡ ಪಾವತಿಸಿದ ನಂತರ ಆರೋಪಿಗಳ ಮೇಲಿರುವ ಪ್ರಕರಣವನ್ನು ಕೈಬಿಡಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.