ADVERTISEMENT

ತಾಜ್ ಮಹಲ್ ಸುತ್ತಮುತ್ತ 5 ಕಿ.ಮೀ ಮರ ಕಡಿಯುವಂತಿಲ್ಲ: ಸುಪ್ರೀಂ ಕೋರ್ಟ್

ಪಿಟಿಐ
Published 2 ಮೇ 2025, 4:46 IST
Last Updated 2 ಮೇ 2025, 4:46 IST
ತಾಜ್ ಮಹಲ್
ತಾಜ್ ಮಹಲ್   

ನವದೆಹಲಿ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ವಿಖ್ಯಾತ ತಾಜ್‌ ಮಹಲ್‌ ಸುತ್ತಮುತ್ತ 5 ಕಿ.ಮೀ ವೈಮಾನಿಕ ದೂರದಲ್ಲಿ ತನ್ನ ಅನುಮತಿ ಇಲ್ಲದೆ ಮರಗಳನ್ನು ಕಡಿಯಯವಂತಿಲ್ಲ ಎನ್ನುವ 2015ರ ನಿರ್ದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಪುನರುಚ್ಛರಿಸಿದೆ.

ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್, ಮಥುರಾ, ಹಾಥ್ರಾಸ್, ತಾಹ್ ಹಾಗೂ ರಾಜಸ್ಥಾನ ಭರತ್‌ಪುರ ಜಿಲ್ಲೆಯಲ್ಲಿ ಹರಡಿಕೊಂಡಿರುವ 10,400 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ತಾಜ್ ಟ್ರಾಪೆಝಿಯಮ್ ಜೋನ್ (TTZ) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

TTZ ವಲಯದಲ್ಲಿ ಹಾಗೂ ತಾಜ್ ಮಹಲ್‌ನ ಐದು ಕಿಲೋ ಮೀಟರ್ ಸುತ್ತಳತೆಯಲ್ಲಿ ಮರ ಕಡಿಯಬೇಕಾದರೆ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ), ಕೇಂದ್ರೀಯ ಅಧಿಕಾರ ಸಮಿತಿಯ (CEC) ಅನುಮತಿ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್‌ ಓಖಾ ಹಾಗೂ ಉಜ್ಜಯ್ ಭುಯನ್ ಅವರಿದ್ದ ‍ಪೀಠ ನಿರ್ದೇಶಿಸಿದೆ.

ADVERTISEMENT

ತಾಜ್ ಮಹಲ್‌ನ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಗೆ ಸಂಬಂಧಪಟ್ಟಂತೆ, 2015ರ ಮೇ 8ರಂದು ನೀಡಿದ್ದ ಆದೇಶ ಮುಂದುವರಿಯಲಿದೆ. ಒಂದು ವೇಳೆ ಮರಗಳನ್ನು ಕಡಿಯಬೇಕಾದರೆ, 50ಕ್ಕೂ ಕಡಿಮೆ ಮರಗಳೂ ಇದ್ದರೂ ಸರಿಯೇ ಅರ್ಜಿ ಸಲ್ಲಿಸಬೇಕು. ಕೇಂದ್ರೀಯ ಅಧಿಕಾರ ಸಮಿತಿಯ ಅಭಿಪ್ರಾಯ ಕೇಳಿ ಸುಪ್ರೀಂ ಕೋರ್ಟ್ ಮರಕಡಿಯಲು ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಿದೆ ಎಂದು ಕೋರ್ಟ್ ಹೇಳಿದೆ.

ಮರಗಳನ್ನು ಕಡಿಯಲು ತುರ್ತು ಅಗತ್ಯ ಇಲ್ಲದಿದ್ದರೆ, ಪರಿಹಾರ ಅರಣ್ಯೀಕರಣ ಸೇರಿದಂತೆ ಇತರ ಎಲ್ಲಾ ಷರತ್ತುಗಳನ್ನು ಪಾಲಿಸಿದ ನಂತರವೇ ಮರ ಕಡಿಯಬಹುದು ಎಂಬ ಷರತ್ತನ್ನು ವಿಭಾಗೀಯ ಅರಣ್ಯ ಅಧಿಕಾರಿ ವಿಧಿಸಬೇಕಾಗುತ್ತದೆ ಎಂದು ಅದು ಹೇಳಿದೆ.

ಮರಗಳನ್ನು ಕಡಿಯಲು ಅನುಮತಿ ನೀಡುವ ಮೊದಲು ಷರತ್ತುಗಳು ಪಾಲನೆಯಾಗಿದೆಯೇ ಎಂದು ನೋಡಿಕೊಳ್ಳುವುದು ಡಿಎಫ್‌ಒ ಅಥವಾ ಸಿಇಸಿಯ ಕರ್ತವ್ಯ ಎಂದು ಕೋರ್ಟ್ ಹೇಳಿದೆ.

ಒಂದು ವೇಳೆ ತುರ್ತಾಗಿ ಮರ ಕಡಿಯದೇ ಇದ್ದರೆ ಮಾನವ ಜೀವಕ್ಕೆ ಹಾನಿಯಾಗಲಿದೆ ಎನ್ನುವ ಪರಿಸ್ಥಿತಿ ಇದ್ದರೆ ಮಾತ್ರ ವಿನಾಯಿತಿ ಅನ್ವಯವಾಗಲಿದೆ ಎನ್ನುವುದನ್ನು ನಾವು ಸ್ಪಷ್ಟಪಡಿಸುತ್ತೇವೆ ಎಂದು ಕೋರ್ಟ್ ಹೇಳಿದೆ.

ಅಲ್ಲದೆ ಇನ್ನೆರಡು ವಿಶ್ವ ಪಾರಂಪರಿಕ ತಾಣಗಳಾದ ಆಗ್ರಾ ಕೋಟೆ ಹಾಗೂ ಫತೇಪುರ ಸಿಕ್ರಿಯ ಸಂರಕ್ಷಣೆಗೆ ಹೆಚ್ಚುವರಿ ನಿರ್ಬಂಧಗಳು ವಿಧಿಸಬೇಕೇ ಎನ್ನುವುದರ ಬಗ್ಗೆ ವರದಿ ನೀಡಿ ಎಂದು ಸಿಇಸಿಗೆ ಸೂಚಿಸಿದೆ.

ಖಾಸಗಿ ಸ್ಥಳದಲ್ಲಿರುವ ಮರಗಳನ್ನು ಕಡಿಯಲು ಇರುವ ನಿರ್ಬಂಧವನ್ನು ಸಡಿಲಗೊಳಿಸಬೇಕು ಎಂದು ಕೋರಿ ಆಗ್ರಾ ಮೂಲಕ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಇದೇ ವೇಳೆ ಕೋರ್ಟ್ ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.