ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್
(ಚಿತ್ರ ಕೃಪೆ–@ANI)
ನವದೆಹಲಿ: ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಆವರಣದಲ್ಲಿ ಶೋಧ ನಡೆಸಿದ ನಂತರ ಅದು ಹುಸಿ ಕರೆ ಎಂದು ತಿಳಿದುಬಂದಿರುವುದಾಗಿ ದೆಹಲಿ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಶನಿವಾರ ಬಾಂಬ್ ಬೆದರಿಕೆ ಸಂದೇಶದ ಇ–ಮೇಲ್ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು, ಬಾಂಬ್ ಪತ್ತೆ ದಳ ಕಟ್ಟಡದಲ್ಲಿ ಶೋಧ ನಡೆಸಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ನಮ್ಮ ಅತಿಥಿಗಳು ಮತ್ತು ಉದ್ಯೋಗಿಗಳ ಸುರಕ್ಷತೆ ಮತ್ತು ಭದ್ರತೆ ನಮಗೆ ಬಹಳ ಮುಖ್ಯ. ನಾವು ಜಾಗರೂಕರಾಗಿರುತ್ತೇವೆ ಎಂದು ತಾಜ್ ಪ್ಯಾಲೇಸ್‌ನ ವಕ್ತಾರರು ತಿಳಿಸಿದ್ದಾರೆ.
ನಿನ್ನೆಯಷ್ಟೆ(ಶುಕ್ರವಾರ) ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಸಂದೇಶ ಬಂದಿತ್ತು. ದೆಹಲಿ ಹೈಕೋರ್ಟ್ ರಿಜಿಸ್ಟಾರ್ ಅವರಿಗೆ ಬೆಳಿಗ್ಗೆ 8.39ಕ್ಕೆ ಬಂದ ಇ–ಮೇಲ್‌ನಲ್ಲಿ, ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಮೂರು ಬಾಂಬ್‌ಗಳನ್ನು ಇರಿಸಿರುವುದಾಗಿ ಬೆದರಿಸಲಾಗಿತ್ತು. ಬಾಂಬೆ ಹೈಕೋರ್ಟ್‌ನ ಅಧಿಕೃತ ಇ-ಮೇಲ್ ಐಡಿಗೆ ಬಂದ ಸಂದೇಶದಲ್ಲಿ, ಬಾಂಬ್ ಇಟ್ಟು ಕಟ್ಟಡವನ್ನು ಸ್ಫೋಟಿಸುವುದಾಗಿ ಹೇಳಲಾಗಿತ್ತು.
ಮಾಹಿತಿ ಲಭ್ಯವಾದ ಕೂಡಲೇ ಪೊಲೀಸರು ಮತ್ತು ಇತರ ಸಂಸ್ಥೆಗಳು ಶೋಧ ಕಾರ್ಯಾಚರಣೆ ಆರಂಭಿಸಿದವು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ಬಳಿಕ ಎರಡೂ ನ್ಯಾಯಾಲಯಗಳಲ್ಲಿ ಯಾವುದೇ ಸ್ಫೋಟಕ ಅಥವಾ ಶಂಕಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ನಂತರ ‘ಹುಸಿ ಬಾಂಬ್ ಬೆದರಿಕೆ’ ಎಂದು ಪೊಲೀಸರು ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.