ADVERTISEMENT

ಕಾನೂನು ಬಾಹಿರ ಮಕ್ಕಳ ದತ್ತು ಪಡೆಯುವವರ ವಿರುದ್ಧ ಕ್ರಮಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ
Published 8 ಜೂನ್ 2021, 14:19 IST
Last Updated 8 ಜೂನ್ 2021, 14:19 IST
.ಸುಪ್ರೀಂಕೋರ್ಟ್‌, ಪಿಟಿಐ ಚಿತ್ರ
.ಸುಪ್ರೀಂಕೋರ್ಟ್‌, ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌–19 ಸಂದರ್ಭದಲ್ಲಿ ಅನಾಥರಾದ ಮಕ್ಕಳನ್ನು ಕಾನೂನುಬಾಹಿರವಾಗಿ ದತ್ತು ಪಡೆದುಕೊಳ್ಳುತ್ತಿರುವ ವ್ಯಕ್ತಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಅನಾಥ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಹಲವು ನಿರ್ದೇಶನಗಳನ್ನು ನೀಡಿರುವ ನ್ಯಾಯಾಲಯ, ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ಅನುಮೋದನೆ ಇಲ್ಲದೆಯೇ ದತ್ತು ಸ್ವೀಕಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.

ಬಾಲ ನ್ಯಾಯ ಕಾಯ್ದೆ–2015 ಹಾಗೂ ಅನಾಥ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಲ್‌.ಎನ್‌. ರಾವ್‌ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ಪೀಠವು ಸೂಚಿಸಿದೆ.

ADVERTISEMENT

ಕಳೆದ ವರ್ಷ ಮಾರ್ಚ್‌ ನಂತರ ಅನಾಥರಾಗಿರುವ ಮಕ್ಕಳನ್ನು ಗುರುತಿಸುವ ಕಾರ್ಯವನ್ನು ಮುಂದುವರಿಸಬೇಕು. ಜತೆಗೆ, ಮಕ್ಕಳಿಗೆ ದೊರೆಯಬೇಕಾದ ಹಣಕಾಸಿನ ಸೌಲಭ್ಯಗಳು ದೊರೆಯುವುದನ್ನು ಮಕ್ಕಳ ಕಲ್ಯಾಣ ಸಮಿತಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಪೋಷಕರು ಅಥವಾ ತಂದೆ–ತಾಯಿ ನಿಧನರಾದ ಬಳಿಕ ಅನಾಥರಾಗುವ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು (ಡಿಸಿಪಿಯು) ತಕ್ಷಣವೇ ಸಂಪರ್ಕಿಸಬೇಕು. ಜತೆಗೆ, ಈ ಮಕ್ಕಳ ಹೊಣೆಯನ್ನು ತೆಗೆದುಕೊಳ್ಳುವ ಪೋಷಕರ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದೆ.

ಅನಾಥರಾಗುವ ಮಕ್ಕಳಿಗೆ ಆಹಾರ, ಔಷಧ, ಬಟ್ಟೆ ಸೇರಿದಂತೆ ಅಗತ್ಯ ಇರುವ ಸೌಲಭ್ಯಗಳನ್ನು ಡಿಸಿಪಿಯು ಕಲ್ಪಿಸಬೇಕು. ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.

ಜುಲೈ 5ರವರೆಗೆ 30,071 ಮಕ್ಕಳು ಅನಾಥರಾಗಿದ್ದಾರೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಹಿತಿ ನೀಡಿವೆ. ಸಾಂಕ್ರಾಮಿಕ ಕಾಯಿಲೆಯಿಂದ ಈ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್‌) ಸೋಮವಾರ ನ್ಯಾಯಾಲಯಕ್ಕೆ ವಿವರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.