ADVERTISEMENT

ದಲಿತ ವಿದ್ಯಾರ್ಥಿ ಸಾವು: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಎನ್‌ಸಿಪಿಸಿಆರ್‌ ಆಗ್ರಹ

ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಥಳಿತಕ್ಕೊಳಗಾಗಿ ಬಾಲಕ ಮೃತಪಟ್ಟಿದ್ದ ಪ್ರಕರಣ

ಪಿಟಿಐ
Published 16 ಆಗಸ್ಟ್ 2022, 17:41 IST
Last Updated 16 ಆಗಸ್ಟ್ 2022, 17:41 IST
   

ನವದೆಹಲಿ: ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕಾಗಿ ಶಿಕ್ಷಕರಿಂದ ಥಳಿತಕ್ಕೊಳಗಾಗಿ ದಲಿತ ಬಾಲಕನೊಬ್ಬ ಮೃತಪಟ್ಟಿದ್ದು, ಈ ಪ್ರಕರಣದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌) ರಾಜಸ್ಥಾನ ಸರ್ಕಾರಕ್ಕೆ ಆಗ್ರಹಿಸಿದೆ.

ರಾಜಸ್ಥಾನದ ಜಲೋರ್‌ ಜಿಲ್ಲೆಯ ಸುರಾನ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇಂದ್ರ ಮೇಘವಾಲ್‌ಗೆ(9) ಶಿಕ್ಷಕ ಚೈಲ್ ಸಿಂಗ್‌ ಜುಲೈ 20ರಂದು ಥಳಿಸಿದ್ದರು. ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್‌ 13ರಂದು ಮೃತಪಟ್ಟಿದ್ದ. ಕೊಲೆ ಆರೋಪದಡಿ ಪೊಲೀಸರು ಚೈಲ್‌ ಸಿಂಗ್‌ನನ್ನು ಬಂಧಿಸಿದ್ದರು.

ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿರುವ ಎನ್‌ಸಿಪಿಸಿಆರ್‌, ‘ಪ‍್ರಕರಣವು ಗಂಭೀರ ಸ್ವರೂಪದ್ದಾಗಿದೆ. ಇದಕ್ಕೆ ಸಂಬಂಧಿಸಿದ ಎಫ್‌ಐಆರ್‌ ಪ್ರತಿ, ಆರೋಪಿ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ಇನ್ನು ಒಂದು ವಾರದೊಳಗೆ ತನಗೆ ಸಲ್ಲಿಸಬೇಕು’ ಎಂದು ಸೂಚಿಸಿದೆ.

ADVERTISEMENT

ರಾಜಸ್ಥಾನದ ಶಿಕ್ಷಣ ಇಲಾಖೆಯು ಪ್ರಕರಣದ ತನಿಖೆಗೆ ಆದೇಶಿಸಿದೆ.

ಶಾಸಕ ಗರ್ಗ್‌ ಹೇಳಿಕೆ:‘ಬಾಲಕನು ಮೇಘವಾಲ್‌ ಸಮುದಾಯಕ್ಕೆ ಸೇರಿದವನು. ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕಾಗಿಯೇ ಶಿಕ್ಷಕರು ಆತನಿಗೆ ಥಳಿಸಿದ್ದಾರೆ ಎಂಬುದು ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ. ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಘಟನೆಯ ನೈಜ ಕಾರಣ ಬಹಿರಂಗವಾಗಲಿದೆ’ ಎಂದು ಜಲೋರ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜೋಗೇಶ್ವರ್‌ ಗರ್ಗ್‌ ಹೇಳಿದ್ದಾರೆ.

‘ಗ್ರಾಮಸ್ಥರು ಹಾಗೂ ಇತರರ ಜೊತೆ ಘಟನೆ ಸಂಬಂಧ ಮಾತನಾಡಿದ್ದೇನೆ. ಬಾಲಕನು ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕಾಗಿಯೇ ಶಿಕ್ಷಕರು ಆತನಿಗೆ ಥಳಿಸಿದ್ದಾರೆ ಎಂಬುದು ಅನುಮಾನ ಹುಟ್ಟಿಸುವಂತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ’ ಎಂದಿದ್ದಾರೆ.

ಕುಟುಂಬಕ್ಕೆ ₹20 ಲಕ್ಷ ನೆರವು
ಜೈಪುರ
: ಮೃತಇಂದ್ರ ಮೇಘವಾಲ್‌ ಕುಟುಂಬಕ್ಕೆ ರಾಜಸ್ಥಾನ ಕಾಂಗ್ರೆಸ್‌ ಮಂಗಳವಾರ ₹20 ಲಕ್ಷ ಪರಿಹಾರ ಪ್ರಕಟಿಸಿದೆ.

ಸಚಿವರಾದ ಮಮತಾ ಭೂಪೇಶ್‌, ಭಜನ್‌ಲಾಲ್‌ ಜಾತವ್‌ ಮತ್ತು ಗೋವಿಂದ ರಾಮ್‌ ಮೇಘವಾಲ್‌ ಅವರೊಂದಿಗೆ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದ ರಾಜಸ್ಥಾನ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗೋವಿಂದ ಸಿಂಗ್‌ ದೊತಾಸ್ರಾ ಅವರು ಪಕ್ಷದ ವತಿಯಿಂದ ₹20 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಕಠಿಣ ಕ್ರಮ:ಆಗ್ರಹ
ನವದೆಹಲಿ
: ಪ್ರಕರಣದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌) ರಾಜಸ್ಥಾನ ಸರ್ಕಾರಕ್ಕೆ ಆಗ್ರಹಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿರುವ ಎನ್‌ಸಿಪಿಸಿಆರ್‌, ‘ಪ‍್ರಕರಣವು ಗಂಭೀರ ಸ್ವರೂಪದ್ದಾಗಿದೆ. ಇದಕ್ಕೆ ಸಂಬಂಧಿಸಿದ ಎಫ್‌ಐಆರ್‌ ಪ್ರತಿ, ಆರೋಪಿ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ಒಂದು ವಾರದೊಳಗೆ ತನಗೆ ಸಲ್ಲಿಸಬೇಕು’ ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.