
ಚೆನ್ನೈ: ರಾಜ್ಯದ ಗ್ರಾಮೀಣ ಜನರ ಜೀವನೋಪಾಯವನ್ನು ರಕ್ಷಿಸಲು ನರೇಗಾ ಯೋಜನೆಯನ್ನೇ ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಶುಕ್ರವಾರ ಅಂಗೀಕರಿಸಿತು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ನಿರ್ಣಯವನ್ನು ಮಂಡಿಸಿದರು.
‘ಜನರು, ವಿರೋಧ ಪಕ್ಷಗಳ ಧ್ವನಿಯನ್ನು ಕಡೆಗಣಿಸಿ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದು ಜನರ ಅಗತ್ಯಗಳನ್ನು ಆಧರಿಸಿದ ಯೋಜನೆಯಲ್ಲ. ಈ ಬಗ್ಗೆ 2025ರ ಡಿ.18ರಂದೇ ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.
ಮಹಾತ್ಮ ಗಾಂಧಿ ಅವರ ಹೆಸರಿನ ಯೋಜನೆಯನ್ನೇ ಮುಂದುವರಿಸಬೇಕು ಎಂದು ಈ ಸದನವು ಆಗ್ರಹಿಸುತ್ತದೆ ಎಂದು ಸ್ಟಾಲಿನ್ ಪ್ರತಿಪಾದಿಸಿದರು.
‘ದೇಶದ ಗ್ರಾಮೀಣ ಜನರ ಜೀವನೋಪಾಯ, ರಾಜ್ಯಗಳ ಆರ್ಥಿಕ ರಚನೆ, ಸ್ಥಳೀಯ ಸಂಸ್ಥೆಗಳ ಅವಲಂಬನೆ ಮತ್ತು ಗ್ರಾಮೀಣ ಮಹಿಳೆಯರ ಉದ್ಯೋಗದ ಅವಕಾಶಗಳನ್ನು ಹಾಳು ಮಾಡುವ ರೀತಿಯಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯನ್ನು ಕೇಂದ್ರವು ವಿನ್ಯಾಸಗೊಳಿಸಿದೆ. ಇದು ನರೇಗಾ ಸ್ವರೂಪವನ್ನೇ ಬದಲಿಸಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
‘ಮೂಲಸೌಕರ್ಯ ಯೋಜನೆಯೇ ಆಗಿರಲಿ ಅಥವಾ ಜನರ ಜೀವನೋಪಾಯವನ್ನು ಉನ್ನತೀಕರಿಸುವ ಯೋಜನೆಯೇ ಆಗಿರಲಿ, ಎಲ್ಲ ಕಾರ್ಯಕ್ರಮಗಳನ್ನು ತಮಿಳುನಾಡಿನಲ್ಲಿ ತಾರತಮ್ಯವಿಲ್ಲದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ’ ಎಂದರು.
ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ ಎಂದು ಸ್ಟಾಲಿನ್ ಹೇಳುತ್ತಿದ್ದಂತೆ, ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.
‘ಯೋಜನೆಯ ಪ್ರಗತಿ ಆಧಾರದಲ್ಲಿ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತಿಲ್ಲ. ತಮಿಳುನಾಡಿನ ಅಭಿವೃದ್ಧಿಯ ಬಗ್ಗೆ ತಾರತಮ್ಯ ಮನೋಭಾವ ಹೊಂದಿದೆ’ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.