
ಚೆನ್ನೈ: ಸುಮಾರು ನಾಲ್ಕು ವರ್ಷಗಳ ಕಾಲ ದ್ರಾವಿಡ ಪಕ್ಷಗಳನ್ನು ಎದುರು ಹಾಕಿಕೊಂಡು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ರಾಜಕಾರಣ ನಡೆಸಿದ್ದ ಕರ್ನಾಟಕ ಕೇಡರ್ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಪಕ್ಷದ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ.
ಕೊಯಮತ್ತೂರಿನಲ್ಲಿ 15 ನಿಮಿಷಗಳ ಕಾಲ ಇತ್ತೀಚಿಗೆ ನಡೆಸಿದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ವೇಳೆ ವ್ಯಕ್ತಪಡಿಸಿರುವ ಅಭಿಪ್ರಾಯವು ಈ ವಿಚಾರಕ್ಕೆ ಮತ್ತಷ್ಟು ಇಂಬು ನೀಡಿದೆ.
‘ಯಾರಿಗೂ ಕೂಡ ತಲೆಯ ಮೇಲೆ ಬಂದೂಕು ಇಟ್ಟು, ಬಲವಂತವಾಗಿ ಪಕ್ಷದಲ್ಲಿ ಇರುವಂತೆ ಹೇಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿಕೂಟ, ಬಿಜೆಪಿಯೊಳಗಿನ ಆಂತರಿಕ ಸಂಘರ್ಷದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ ಅಣ್ಣಾಮಲೈ, ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದರು. ಆದರೆ, ಎಲ್ಲಿಯೂ ಕೂಡ ಪಕ್ಷದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೆಸರು ಉಲ್ಲೇಖಿಸಿಲ್ಲ.
ರಾಜ್ಯದಲ್ಲಿ ಬಿಜೆಪಿ ಮೈತ್ರಿಕೂಟವನ್ನು ಸಕ್ರಿಯಗೊಳಿಸಿ, 2026ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಕಳೆದ ಏಪ್ರಿಲ್ ತಿಂಗಳಲ್ಲಿ ಅಣ್ಣಾಮಲೈ ಅವರು ಸ್ಥಾನ ತ್ಯಜಿಸಿದ್ದರು. ದ್ರಾವಿಡ ಪಕ್ಷದಲ್ಲಿಯೇ ರಾಜಕೀಯ ಆರಂಭಿಸಿದ್ದ ನಾಗೇಂದ್ರನ್ ಅವರು, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಈ ಆಯ್ಕೆ ನಡೆದಿತ್ತು.
‘ನಾನು ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆಗೊಂಡು, ರಾಜಕೀಯಕ್ಕೆ ಸೇರಿದ್ದೇನೆ. ರಾಜಕೀಯಕ್ಕಾಗಿ ಸ್ವಂತ ಹಣವನ್ನು ವ್ಯಯಿಸಿದ್ದೇನೆ. ನಾನು ರಾಜಕೀಯದಲ್ಲಿ ಖುಷಿಯಲ್ಲಿದ್ದರೆ, ಇಲ್ಲಿಯೇ ಉಳಿಯುತ್ತೇನೆ. ಇಲ್ಲವಾದರೆ, ನಾನು ರಾಜಕೀಯ ತೊರೆದು, ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಯಾರೂ ಕೂಡ ಬಂದೂಕನ್ನು ತಲೆ ಮೇಲಿಟ್ಟು, ಪಕ್ಷದಲ್ಲಿ ಇರುವಂತೆ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ಮೈತ್ರಿಕೂಟವನ್ನು ಸಾರ್ವಜನಿಕವಾಗಿ ಟೀಕಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾತುಕೊಟ್ಟಿದ್ದರಿಂದ ಸುಮ್ಮನಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಅಣ್ಣಾಮಲೈ ಪಕ್ಷದ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಿ, ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಆಕ್ರಮಣಕಾರಿಯಾಗಿ ಟೀಕಿಸುವ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಎಐಎಡಿಎಂಕೆ– ಬಿಜೆಪಿ ಮೈತ್ರಿಯಾದ ಬಳಿಕ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಇದು ಅಣ್ಣಾಮಲೈ ಅಸಮಾಧಾನಗೊಳ್ಳಲು ಕಾರಣ’ ಎಂದು ಪಕ್ಷದ ಮೂಲಗಳು ತಿಳಿಸಿವೆ.