ADVERTISEMENT

ಬಿಜೆಪಿ ಜತೆ ಕಿಂಚಿತ್ತೂ ಹೊಂದಾಣಿಕೆ ಇಲ್ಲ: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್

ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ, ಕಿಂಗ್ ಮೇಕರೂ ಅಲ್ಲ, ನನ್ನ ವ್ಯಾಪ್ತಿ ನನಗೆ ಗೊತ್ತಿದೆ ಎಂದ ಸ್ಟಾಲಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2022, 16:01 IST
Last Updated 20 ಸೆಪ್ಟೆಂಬರ್ 2022, 16:01 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್   

ಚೆನ್ನೈ: ಬಿಜೆಪಿ ಜತೆ ಕಿಂಚಿತ್ತೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಜತೆಗಿನ ಮೈತ್ರಿ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಚುನಾವಣಾ ಯಶಸ್ಸಿಗಾಗಿ ಎಲ್ಲವನ್ನೂ ಒಂದೇ ವೇದಿಕೆಯಡಿ ತರುವ ಬಿಜೆಪಿ ಯತ್ನವನ್ನು ಎಲ್ಲ ರಾಜಕೀಯ ಪಕ್ಷಗಳು ವಿರೋಧಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ADVERTISEMENT

ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ. ಅಥವಾ ಆ ಹುದ್ದೆಯ ಕಿಂಗ್ ಮೇಕರ್ ಕೂಡಾ ಅಲ್ಲ ಎಂದಿರುವ ಸ್ಟಾಲಿನ್, ನನ್ನ ವ್ಯಾಪ್ತಿ ನನಗೆ ತಿಳಿದಿದೆ ಎಂದು ಹೇಳಿದ್ದಾರೆ.

ತಮ್ಮ ಸರ್ಕಾರದ 16 ತಿಂಗಳ ಆಡಳಿತ ಸಾಧನೆಗಳ ಬಗ್ಗೆಯೂ ‘ನ್ಯೂಸ್ 18’ ತಮಿಳು ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಬಳಿಕ ರಾಜಕೀಯದ ಕುರಿತೂ ಉಲ್ಲೇಖಿಸಿದ್ದಾರೆ.

‘ಸದ್ಯದ ಮೈತ್ರಿಯನ್ನೇ 2024ರ ಲೋಕಸಭೆ ಚುನಾವಣೆಗೂ ಮುಂದುವರಿಸಲಿದ್ದೇವೆ. ತಮಿಳುನಾಡು ಮತ್ತು ಪುದುಚೇರಿಯ ಎಲ್ಲ 40 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲುವ ಬಗ್ಗೆ ಭರವಸೆ ಇದೆ’ ಎಂದು ಸ್ಟಾಲಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.