ಚುನಾವಣೆ
- ಐಸ್ಟಾಕ್ ಚಿತ್ರ
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಪಕ್ಷಕ್ಕೆ ಐದು ವಿಧಾನಸಭಾ ಕ್ಷೇತ್ರಗಳನ್ನು ನೀಡುವಂತೆ ಪಕ್ಷದ ಮುಖಂಡರು ಡಿಎಂಕೆ ನಾಯಕರಲ್ಲಿ ಮನವಿ ಮಾಡಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಅಧ್ಯಕ್ಷ ಖಾದರ್ ಮೊಹಿದ್ದೀನ್ ಅವರು ಭಾನುವಾರ ಡಿಎಂಕೆ ನಾಯಕರಲ್ಲಿ ಈ ಮನವಿ ಮಾಡಿದ್ದಾರೆ.
ಸ್ಥಾನ ಹಂಚಿಕೆ ಸಮಿತಿ ಅಧ್ಯಕ್ಷ ಟಿ.ಆರ್ ಬಾಲು ಅವರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ. ನಾವು 5 ಸ್ಥಾನಗಳನ್ನು ಬಿಟ್ಟುಕೊಡುವಂತೆ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಐಯುಎಂಎಲ್ ರಾಜಕೀಯ ಪಕ್ಷ ಮಾತ್ರವಲ್ಲ, ಅದು ನಮ್ಮ ಸಮುದಾಯ ಆಧಾರಿತ ಪಕ್ಷವಾಗಿದ್ದು, ತಮಿಳುನಾಡಿನ 60 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ಕರುಣಾನಿಧಿ ಅವರ ಕಾಲದಲ್ಲಿ ಐಯುಎಂಎಲ್‌ಗೆ ಐದು ವಿಧಾನಸಭಾ ಕ್ಷೇತ್ರಗಳನ್ನು ನೀಡಲಾಗುತ್ತಿತ್ತು. ಈಗಿನ ಡಿಎಂಕೆ ನಾಯಕತ್ವವೂ ಅದೇ ಪ್ರಮಾಣದಲ್ಲಿ ನಮಗೆ ಸ್ಥಾನಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಮೊಹಿದ್ದೀನ್ ಪತ್ರಕರ್ತರಿಗೆ ತಿಳಿಸಿದರು.
ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮುಸ್ಲಿಂ ಸಮುದಾಯದ ಉಪಸ್ಥಿತಿ ಇರುವುದನ್ನು ಉಲ್ಲೇಖಿಸಿದ ಅವರು, ಡಿಎಂಕೆ ಪಕ್ಷ ಮೈತ್ರಿ ಅಡಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಗೆ ಒಟ್ಟು 16 ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕು. ಈ ಆಧಾರದ ಮೇಲೆ 16 ಮುಸ್ಲಿಂ ಶಾಸಕರು ವಿಧಾನಸಭೆಗೆ ಹೋಗಬೇಕು ಎಂಬುದು ನಮ್ಮ ಬೇಡಿಕೆ ಎಂದರು.
ಈ ವಿಷಯವನ್ನು ನಾವು ಸ್ಪಷ್ಟವಾಗಿ ಅವರ ಮುಂದಿಟ್ಟಿದ್ದೇವೆ ಎಂದು ಮೊಹಿದ್ದೀನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.