ADVERTISEMENT

ಪ್ರಧಾನಿ ಮೋದಿಗೆ ಗುಡಿ ಕಟ್ಟಿಸಿದ ತಮಿಳುನಾಡಿನ ರೈತ; ನಿತ್ಯವೂ ಆರತಿ

ಏಜೆನ್ಸೀಸ್
Published 26 ಡಿಸೆಂಬರ್ 2019, 7:48 IST
Last Updated 26 ಡಿಸೆಂಬರ್ 2019, 7:48 IST
ನರೇಂದ್ರ ಮೋದಿ ಗುಡಿಯ ಮುಂದೆ ರೈತ ಶಂಕರ್‌
ನರೇಂದ್ರ ಮೋದಿ ಗುಡಿಯ ಮುಂದೆ ರೈತ ಶಂಕರ್‌    

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡಿನ ರೈತ ಗುಡಿ ಕಟ್ಟಿಸಿ ಅಭಿಮಾನ ಪ್ರದರ್ಶಿಸಿದ್ದಾರೆ. ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ತಮ್ಮ ಜಮೀನಿನಲ್ಲಿಯೇ 'ಮೋದಿ ಗುಡಿ' ಕಟ್ಟಿಸಿದ್ದಾರೆ.

ಗುಡಿಯಲ್ಲಿ ನರೇಂದ್ರ ಮೋದಿ ಅವರ ಮೂರ್ತಿಯ ಜತೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಈಗಿನ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಫೋಟೊಗಳೂ ಇವೆ.

ತಿರುಚಿರಪಳ್ಳಿಯಿಂದ 63 ಕಿ.ಮೀ. ದೂರದಲ್ಲಿರುವ ಎರಕುಡಿ ಗ್ರಾಮದಲ್ಲಿ 50 ವರ್ಷ ವಯಸ್ಸಿನ ರೈತ ಪಿ.ಶಂಕರ್‌ ಅವರದೇ ಜಮೀನಿನಲ್ಲಿ ಕಳೆದ ವಾರ ಗುಡಿ ಉದ್ಘಾಟಿಸಿದ್ದಾರೆ. ಗುಡಿಯಲ್ಲಿ ನಿತ್ಯವೂ ನರೇಂದ್ರ ಮೋದಿ ಮೂರ್ತಿಗೆ ಆರತಿ ಬೆಳಗಲಾಗುತ್ತಿದೆ.

ADVERTISEMENT

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯಂತಹ ಕಲ್ಯಾಣ ಯೋಜನೆಗಳ ಲಾಭ ಪಡೆದಿದ್ದು, ಪ್ರಧಾನಿ ಮೋದಿ ಅವರ ಕಾರ್ಯ ಮತ್ತು ಯೋಜನೆಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಶಂಕರ್‌ ಹೇಳಿದ್ದಾರೆ.

8 x 8 ಅಡಿ ಅಳತೆಯ ಗುಡಿಯ ಮುಂದೆ ರಂಗೋಲಿಯು ಜನರನ್ನು ಆಕರ್ಷಿಸುತ್ತದೆ. ನಗುಮುಖದ ನರೇಂದ್ರ ಮೋದಿ ಮೂರ್ತಿಯನ್ನು ಇಟ್ಟಿರುವ ಗುಡಿ ನಿರ್ಮಿಸಲು ₹ 1.2 ಲಕ್ಷ ಖರ್ಚು ಮಾಡಿದ್ದಾರೆ. ದಿನವೂ ದೀಪಗಳನ್ನು ಹಚ್ಚಿ, ಹೂವಿನ ಮಾಲೆ ಹಾಕಿ ಆರತಿ ಮಾಡಲಾಗುತ್ತಿದೆ.

'ಅಯ್ಯ ಅವರಿಗೆ ಎಂಟು ತಿಂಗಳ ಹಿಂದೆಯೇ ಗುಡಿ ಕಟ್ಟುವ ಕೆಲಸ ಆರಂಭಿಸಿದೆ. ಆದರೆ, ಹಲವು ಅಡಚಣೆಗಳಿಂದ ನಿರ್ಮಾಣ ಕೆಲಸ ಆಗಲೇ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕಳೆದ ವಾರವಷ್ಟೇ ಗುಡಿ ಉದ್ಘಾಟಿಸಲಾಗಿದೆ‘ ಎಂದು ಶಂಕರ್‌ ಹೇಳಿಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯಿಂದ ₹ 2,000, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಗ್ಯಾಸ್‌ ಸಂಪರ್ಕ ಹಾಗೂ ಶೌಚಾಲಯ ಸೌಲಭ್ಯ ಪಡೆದಿದ್ದೇನೆ. ಮೋದಿ ವ್ಯಕ್ತಿತ್ವವೂ ಇಷ್ಟವಾಗುತ್ತದೆ ಎಂದಿದ್ದಾರೆ.

'ಗುಡಿಗೆ ಸೂಕ್ತ ರೀತಿಯಲ್ಲಿ ಕುಂಭಾಭಿಷೇಕ ನಡೆಸುವ ಇಚ್ಛೆಯಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಹಂಬಲ ಹೊಂದಿದ್ದು, ಅಕ್ಟೋಬರ್‌ನಲ್ಲಿ ಮಹಾಬಲಿಪುರಂಗೂ ಭೇಟಿ ನೀಡಿದ್ದೆ. ಆದರೆ, ಭೇಟಿ ಮಾಡುವ ಅವಕಾಶ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.