ADVERTISEMENT

ವೈದ್ಯಕೀಯ ಕೋರ್ಸ್‌: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಮೀಸಲಾತಿ

ತಮಿಳುನಾಡು ಸರ್ಕಾರದ ಮಸೂದೆಗೆ ರಾಜ್ಯಪಾಲರ ಅಂಕಿತ

ಪಿಟಿಐ
Published 30 ಅಕ್ಟೋಬರ್ 2020, 11:59 IST
Last Updated 30 ಅಕ್ಟೋಬರ್ 2020, 11:59 IST
ಬನ್ವಾರಿಲಾಲ್‌ ಪುರೋಹಿತ್‌
ಬನ್ವಾರಿಲಾಲ್‌ ಪುರೋಹಿತ್‌   

ಚೆನ್ನೈ:ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ನೀಟ್‌ ತೇರ್ಗಡೆಯಾಗಿರುವ, ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಶುಕ್ರವಾರ ಅನುಮೋದನೆ ನೀಡಿದ್ದಾರೆ.

‘ರಾಜ್ಯಪಾಲರು ಈ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಜನರಿಗೆ ತಿಳಿಸಲು ಬಯಸುತ್ತೇವೆ’ ಎಂದು ರಾಜಭವನವು ಶುಕ್ರವಾರ ತಿಳಿಸಿದೆ. ಮಸೂದೆ ಕುರಿತಂತೆ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾ(ಎಸ್‌ಜಿಐ) ಅವರಿಂದ ರಾಜ್ಯಪಾಲರು ಸೆ.26ರಂದು ಕಾನೂನು ಸಲಹೆ ಕೇಳಿದ್ದರು. ಅ.29ರಂದು ಎಸ್‌ಜಿಐ ತಮ್ಮ ಸಲಹೆಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಇದಾದ ಕೂಡಲೇ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಿದ್ದಾರೆ ಎಂದು ರಾಜಭವನವು ಉಲ್ಲೇಖಿಸಿದೆ.

2020–21 ಶೈಕ್ಷಣಿಕ ವರ್ಷದಿಂದಲೇ ಈ ಮೀಸಲಾತಿ ಜಾರಿಗೆ ತರಲು ನಿರ್ಧರಿಸಿದ್ದ ರಾಜ್ಯ ಸರ್ಕಾರವು ಈ ಕುರಿತ ಆದೇಶವನ್ನೂ ಹೊರಡಿಸಿದೆ.

ADVERTISEMENT

ಮಸೂದೆಗೆ ಸೆ.15ರಂದು ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿತ್ತು. ಇದಾದ ನಂತರದಲ್ಲಿ ರಾಜ್ಯಪಾಲರು ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು. ರಾಜ್ಯಪಾಲರು ಈ ಮಸೂದೆಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಇತ್ತೀಚೆಗೆ ಕೇಳಿಬಂದಿತ್ತು. ಇದರ ನಡುವೆಯೇ ‘ಮಸೂದೆ ಸಂವಿಧಾನಬದ್ಧವಾಗಿದೆ’ ಎನ್ನುವ ಎಸ್‌ಜಿಐ ಸಲಹೆ ದೊರಕಿದ ಬೆನ್ನಲ್ಲೇ ರಾಜ್ಯಪಾಲರ ಹಸಿರು ನಿಶಾನೆ ದೊರೆತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಗಳು ಆರಂಭವಾಗಿವೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದರು.

ಡಿಎಂಕೆ ಪ್ರತಿಭಟನೆ: ರಾಜ್ಯಪಾಲರು ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಂಕೆ ಪಕ್ಷವು ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಮಸೂದೆಗೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರದ ಎಐಎಡಿಎಂಕೆ ನಾಯಕರ ವಿರುದ್ಧವೂ ಡಿಎಂಕೆ ಆಕ್ರೋಶ ವ್ಯಕ್ತಪಡಿಸಿತ್ತು. ‘ಮಸೂದೆಗೆ ಒಪ್ಪಿಗೆ ನೀಡದ ಹೊರತು ರಾಜ್ಯಪಾಲರ ಬಳಿ ಬೇರೆ ಯಾವ ಮಾರ್ಗವೂ ಇರಲಿಲ್ಲ. ಪಕ್ಷದ ಪ್ರತಿಭಟನೆ ಹಾಗೂ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ನಿರ್ದೇಶನದಿಂದ ತಕ್ಷಣದಲ್ಲೇ ಈ ಮಸೂದೆಗೆ ಒಪ್ಪಿಗೆ ದೊರಕಿದೆ’ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್‌ ಟ್ವೀಟ್ ಮೂಲಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.