ADVERTISEMENT

ತಮಿಳುನಾಡು: ಮತದಾರರ ಸಂಖ್ಯೆ 97.37 ಲಕ್ಷದಷ್ಟು ಇಳಿಕೆ

ಎಸ್‌ಐಆರ್‌: ಮತದಾರರ ಪಟ್ಟಿಗೆ ಸೇರ್ಪಡೆ ಕೋರಿ 1.85 ಲಕ್ಷ ಹೊಸ ಅರ್ಜಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 16:03 IST
Last Updated 27 ಡಿಸೆಂಬರ್ 2025, 16:03 IST
   

ಪ್ರಜಾವಾಣಿ ವಾರ್ತೆ

ಚೆನ್ನೈ: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಮೊದಲ ಹಂತ ಪೂರ್ಣಗೊಂಡಿದ್ದು, ಚುನಾವಣಾ ಆಯೋಗವು ಇತ್ತೀಚೆಗೆ  ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು ಮತದಾರರ ಸಂಖ್ಯೆ 97.37 ಲಕ್ಷದಷ್ಟು ಇಳಿಕೆಯಾಗಿದೆ. ಇದರ ಬೆನ್ನಲ್ಲೇ  ಸುಮಾರು 1.85 ಲಕ್ಷದಷ್ಟು ಮತದಾರರು  ಮತದಾರರ ಪಟ್ಟಿಗೆ ಸೇರ್ಪಡೆ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. 

 

ADVERTISEMENT

ಎಸ್‌ಐಆರ್‌ ವಿರುದ್ಧ ಆಡಳಿತಾರೂಢ  ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಆಕ್ಷೇಪಣೆ ಸಲ್ಲಿಸುವುದನ್ನು ಮುಂದುವರಿಸಿವೆ. ಈ ನಡುವೆಯೇ ನಮೂನೆ –6 ಸಲ್ಲಿಸುವರ ಸಂಖ್ಯೆಯೂ ( ಮತದಾರರ ಪಟ್ಟಿಗೆ ಸೇರ್ಪಡೆ ಕೋರಿ ಹೊಸ ಅರ್ಜಿ) ಹೆಚ್ಚುತ್ತಿದೆ. 

 

ಹೊಸ ನೋಂದಣಿಗೆ, ದಾಖಲೆಗಳನ್ನು ಹೊಂದಿಸುವುದು ಜನರಿಗೆ ಸಮಸ್ಯೆಯಾಗಿದ್ದು, ಈ ಸಮಸ್ಯೆ ಪರಿಹಾರಕ್ಕಾಗಿ  ತಮಿಳುನಾಡು ಸರ್ಕಾರ, ಆನ್‌ಲೈನ್‌ ಬದಲು ಭೌತಿಕ ರೂಪದಲ್ಲಿ ಜನನ ಪ್ರಮಾಣಪತ್ರಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಜನರು ಡಿ. 26ರಿಂದ 2026ರ ಜನವರಿ 25ರವರೆಗೆ  ₹60 ಪಾವತಿಸಿ, ತಹಶೀಲ್ದಾರ್‌ ಕಚೇರಿಯಿಂದ ಈ ಪ್ರಮಾಣ ಪತ್ರವನ್ನು  ಪಡೆದು ಸಲ್ಲಿಸಬಹುದು.

 

ನವೆಂಬರ್‌ 4ರಿಂದ ತಮಿಳುನಾಡಿನಲ್ಲಿ ಎಸ್‌ಐಆರ್‌ಗೆ ಚಾಲನೆ ಲಭಿಸಿತ್ತು. ಅದಕ್ಕೂ ಮುನ್ನ ರಾಜ್ಯದ ಒಟ್ಟು ಮತದಾರರ ಸಂಖ್ಯೆ 6.41 ಲಕ್ಷ ಇತ್ತು. ಡಿ.19ರಂದು ಕರಡು ಪಟ್ಟಿ ಪ್ರಕಟಗೊಂಡಾಗ ಈ ಸಂಖ್ಯೆ 5.43 ಲಕ್ಷಕ್ಕೆ ಇಳಿಕೆಯಾಗಿತ್ತು. ಮೃತಪಟ್ಟವರು, ಸ್ಥಳಾಂತರಗೊಂಡವರು, ಬಹು ನೋಂದಣಿ ಸೇರಿದಂತೆ 97.37 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. 

 

ಮತದಾರರ ಪಟ್ಟಿಗೆ ಸೇರ್ಪಡೆ ಕೋರಿ ಚುನಾವಣಾ ಆಯೋಗಕ್ಕೆ ಡಿಎಂಕೆ ಇದುವರೆಗೆ  24 ಅರ್ಜಿಗಳನ್ನು ಸಲ್ಲಿಸಿದೆ.  ಎಐಎಡಿಎಂಕೆ ಸೇರ್ಪಡೆಗಾಗಿ 22 ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ  52 ಮನವಿಗಳನ್ನು ಸಲ್ಲಿಸಿದೆ. 

ಮತದಾರರ ಅಂತಿಮ ಪಟ್ಟಿ 2026ರ ಫೆಬ್ರುವರಿ 17ರಂದು ಪ್ರಕಟಗೊಳ್ಳಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.