ಚೆನ್ನೈ: ಸಮಗ್ರ ಶಿಕ್ಷಣ ಯೋಜನೆಯಡಿ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಬರಬೇಕಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿಯ (ಆ. 29ರಿಂದ) ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅನಾರೋಗ್ಯಕ್ಕೀಡಾಗಿದ್ದು, ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜ್ಯಕ್ಕೆ ಅನುದಾನ ಬಿಡುಗಡೆ ಆಗುವವರೆಗೂ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲೇ ತಮ್ಮ ಪ್ರತಿಭಟನೆ ಮುಂದುವರಿಸುವುದಾಗಿ ಭಾನುವಾರ ತಿಳಿಸಿದ್ದಾರೆ.
‘ಉಪವಾಸದ ಮೂರನೇ ದಿನ ಅಧಿಕ ರಕ್ತದೊತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವೆ. ವೈದ್ಯರ ಸಲಹೆ ಮೇರೆಗೆ ತಿರುವಳ್ಳೂರ್ ಸರ್ಕಾರಿ ಆಸ್ಪತ್ರೆಯಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದೇನೆ’ ಎಂದು ಸಂಸದರು ಹೇಳಿದ್ದಾರೆ.
‘ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮಿಳುನಾಡಿಗೆ ಅನುದಾನ ಕೊಡುತ್ತಿಲ್ಲ. ಇದರ ವಿರುದ್ಧ ಜನರು ಧ್ವನಿ ಎತ್ತಬೇಕು’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಸಂಸದರ ಹೋರಾಟಕ್ಕೆ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದಿರುವ ಕಾಂಗ್ರೆಸ್ ಸಂಸದ ಮಣಿಕಂ ಟ್ಯಾಗೋರ್, ‘ಈ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.