ADVERTISEMENT

ತಮಿಳುನಾಡು: ರಜನಿಕಾಂತ್ ಬೆಂಬಲ ಕೋರಿದ ಪ್ರಮುಖ ರಾಜಕೀಯ ಪಕ್ಷಗಳು

ಪ್ರಜಾವಾಣಿ ವಿಶೇಷ
Published 1 ಜನವರಿ 2021, 14:00 IST
Last Updated 1 ಜನವರಿ 2021, 14:00 IST
ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳು
ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳು   

ಚೆನ್ನೈ: ತಮಿಳುನಾಡಿನಲ್ಲಿ ರಜನಿಕಾಂತ್ ಪ್ರಭಾವವನ್ನು ಅರಿತಿರುವ ಪ್ರಮುಖ ರಾಜಕೀಯ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೂಪರ್‌ಸ್ಟಾರ್ ಬೆಂಬಲವನ್ನು ಕೋರಿವೆ.

ತಮಿಳುನಾಡು ರಾಜಕೀಯ ರಂಗದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ನೂತನ ಪಕ್ಷವು ಭಾರಿ ಸಂಚಲವನ್ನೇ ಉಂಟು ಮಾಡುವ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಆದರೆ ಅನಾರೋಗ್ಯದ ಕಾರಣಗಳಿಂದಾಗಿ ಹೊಸ ರಾಜಕೀಯ ಪಕ್ಷ ಕಟ್ಟುವ ಯೋಜನೆಯಿಂದ ಅವರು ಹಿಂದೆ ಸರಿದಿದ್ದಾರೆ.

ಈ ಮೂಲಕ ರಾಜಕೀಯ ಅಖಾಡಕ್ಕೆ ಇಳಿಯುವ ಮೊದಲೇ ಪರದೆ ಎಳೆದಿದ್ದರು. ಇದು ಅಭಿಮಾನಿಗಳಲ್ಲೂ ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದೆ.

ADVERTISEMENT

ಮಕ್ಕಳ್ ನೀದಿ ಮಯ್ಯಂ ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್ ಸೇರಿದಂತೆ ಎಐಎಡಿಎಂಕೆ, ಬಿಜೆಪಿ ಹಾಗೂ ಇತರೆ ರಾಜಕೀಯ ಪಕ್ಷಗಳು ರಜನಿಕಾಂತ್‌ ಅವರಿಗೆ ಮನವಿ ಮಾಡಿವೆ.

ರಜನಿಕಾಂತ್ ಬೆಂಬಲ ಕೋರುವುದಾಗಿ ಕಮಲ್ ಹಾಸನ್, ಬಹಿರಂಗವಾಗಿಯೇ ಘೋಷಿಸಿದ್ದಾರೆ. ಅತ್ತ ನಟನ ಬೆಂಬಲ ಪಕ್ಷದ ಜೊತೆಗಿರುತ್ತದೆ ಎಂದು ಬಿಜೆಪಿ ಭರವಸೆ ವ್ಯಕ್ತಪಡಿಸಿದೆ. ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಆಡಳಿತರೂಢ ಎಐಎಡಿಎಂಕೆ ಪಕ್ಷವು, ಎಂಜಿಆರ್ ಆಡಳಿತ ಮರಳಿ ತರುವುದಾಗಿ ಘೋಷಿಸಿರುವ ಸೂಪರ್‌ಸ್ಟಾರ್ ಬೆಂಬಲ ಯಾವತ್ತೂ ಪಕ್ಷದ ಜೊತೆಗಿರುತ್ತದೆ ಎಂದು ಹೇಳಿದೆ.

ಹಾಗಿದ್ದರೂ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಜನಿಕಾಂತ್ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಗಳಿಲ್ಲ ಎಂದೇ ಅಂದಾಜಿಸಲಾಗಿದೆ. ಪ್ರಮುಖ ಪಕ್ಷಗಳು ರಜನಿಕಾಂತ್ ಅವರನ್ನು ಆಹ್ವಾನಿಸುವ ಮೂಲಕ ಸೂಪರ್‌ಸ್ಟಾರ್ ಅನುಯಾಯಿಗಳಿಗೆ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಸಂದೇಶ ರವಾನಿಸುತ್ತಿವೆ.

ರಜನಿಕಾಂತ್ ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಹಿನ್ನಡೆಯೆಂದೇ ಪರಿಗಣಿಸಲಾಗಿದೆ. ಆದರೂ ಬಿಜೆಪಿ ಮೈತ್ರಿಕೂಟಕ್ಕೆ ರಜನಿ ಬೆಂಬಲ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡರು ನಂಬಿಕೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಜನಿಕಾಂತ್ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.