ADVERTISEMENT

ತೌತೆ ಚಂಡಮಾರುತ ಇಂದು ಗುಜರಾತ್‌ ಕರಾವಳಿಗೆ ಪ್ರವೇಶ

ಪಿಟಿಐ
Published 16 ಮೇ 2021, 19:45 IST
Last Updated 16 ಮೇ 2021, 19:45 IST
   

ಅಹಮದಾಬಾದ್‌:ತೌತೆ ಚಂಡಮಾರುತವು ಮುಂದಿನ 24 ತಾಸುಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಸೋಮವಾರ ಸಂಜೆಯ ಹೊತ್ತಿಗೆ ಗುಜರಾತ್‌ ಕರಾವಳಿಯನ್ನು ‍ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಭಾನುವಾರ ತಿಳಿಸಿದೆ.

ಪೋರ್‌ಬಂದರ್‌ ಮತ್ತು ಭಾವನಗರ ಜಿಲ್ಲೆಯ ಮಹುವಾ ನಡುವೆ ‘ತೌತೆ’ ಮಂಗಳವಾರ ಬೆಳಗ್ಗಿನ ಹೊತ್ತಿಗೆ ಹಾದು ಹೋಗಲಿದೆ. ಚಂಡಮಾರುತವು ಕರಾವಳಿಗೆ ಅಪ್ಪಳಿಸುವ ಹೊತ್ತಿಗೆ ಸುಮಾರು ಮೂರು ಮೀಟರ್‌ ಎತ್ತರದ ಅಲೆಗಳು ಸೃಷ್ಟಿಯಾಗಲಿವೆ.

ಗುಜರಾತ್‌ ಕರಾವಳಿ ಸಮೀಪಿಸುವ ಹೊತ್ತಿಗೆ ಗಾಳಿಯ ವೇಗವು ತಾಸಿಗೆ 120ರಿಂದ 150 ಕಿ.ಮೀ. ಇರಬಹುದು. ಸೋಮವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸಮುದ್ರವು ಪ್ರಕ್ಷುಬ್ಧವಾಗಿ ಇರಲಿದೆ. ಸೌರಾಷ್ಟ್ರ ಮತ್ತು ಕಛ್‌ ವಿಭಾಗಗಳು ಹಾಗೂ ಕೇಂದ್ರಾಡಳಿತ ಪ್ರದೇಶ ದಿಯುನಲ್ಲಿ ಮಂಗಳವಾರ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.

ಗುಜರಾತ್‌ನ ಕರಾವಳಿಯ ತಗ್ಗು‍ಪ್ರದೇಶಗಳ 1.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್‌) 54 ತಂಡಗಳನ್ನು ಕರಾವಳಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಸಶಸ್ತ್ರ ಪಡೆಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆಯ ಎಂಟು ಘಟಕಗಳು ರಾಜ್ಯದಲ್ಲಿವೆ. ಅವುಗಳಲ್ಲಿ ನಿರಂತರವಾಗಿ ಉತ್ಪಾದನೆ ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲು ನಿರ್ದೇಶನ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.