ADVERTISEMENT

ಹೋಟೆಲ್‌, ಕಲ್ಯಾಣ ಮಂಟಪಗಳಿಗೆ ‘ಸುಪ್ರೀಂ’‌ ನೋಟಿಸ್‌

ಅಧಿಕ ತೆರಿಗೆ: ಬಿಬಿಎಂಪಿ ಮೇಲ್ಮನವಿ ವಿಚಾರಣೆಗೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 20:40 IST
Last Updated 21 ಸೆಪ್ಟೆಂಬರ್ 2019, 20:40 IST
   

ನವದೆಹಲಿ: ವಸತಿ ಸೌಲಭ್ಯ ಒಳ ಗೊಂಡಿರುವ ಹೋಟೆಲ್‌ ಮತ್ತು ಕಲ್ಯಾಣ ಮಂಟಪಗಳಿಗೆ ಅಧಿಕ ತೆರಿಗೆ ವಿಧಿಸುವ ನಿಯಮ ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿರುವ ನ್ಯಾಯ ಮೂರ್ತಿ ಯು.ಯು.ಲಲಿತ್‌ ನೇತೃತ್ವದ ಪೀಠ, ಈ ಕುರಿತು ಪ್ರತಿಕ್ರಿಯೆ ನೀಡು ವಂತೆ ಸೂಚಿಸಿ ಹೋಟೆಲ್‌, ಕಲ್ಯಾಣ ಮಂಟಪಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.

ಸ್ಥಳೀಯ ಸಂಸ್ಥೆಯು ಯಾವುದೇ ಆಸ್ತಿ ಮತ್ತು ಸೇವೆಗೆ ಸಂಬಂಧಿಸಿದಂತೆ ತೆರಿಗೆ ವಿಧಿಸುವ, ವರ್ಗೀಕರಿಸುವ ಅಧಿಕಾರ ಹೊಂದಿದೆ. ಕಾಯ್ದೆಗೆ ತಿದ್ದು ಪಡಿ ತಂದಿದ್ದನ್ನು ಅರ್ಥೈಸಿಕೊಳ್ಳಲು ಹೈಕೋರ್ಟ್‌ ವಿಫಲವಾಗಿದೆ. ಹೋಟೆಲ್‌, ಕಲ್ಯಾಣ ಮಂಟಪಗಳ ಅಧಿಕ ಪ್ರಮಾಣದ ಘನತ್ಯಾಜ್ಯದ ವಿಲೇ ವಾರಿಯ ಜವಾಬ್ದಾರಿ ಸ್ಥಳೀಯ ಸಂಸ್ಥೆಯದ್ದಾಗಿದೆ ಎಂದು ಬಿಬಿಎಂಪಿ ಪರ ವಕೀಲ ಸಂಜಯ್‌ ನುಲಿ ವಿವರಿಸಿದರು.

ADVERTISEMENT

ಕಾಯ್ದೆಗೆ ತಿದ್ದುಪಡಿ ತರುವ ಮೊದಲ ಹಾಗೂ ನಂತರ ಸ್ಥಿತಿಗತಿಯನ್ನು ವಿವರಿಸುವ ಸೂಚ್ಯಂಕವನ್ನು ವಿಚಾರಣೆಗೆ ಮೊದಲು ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ಪೀಠ ನ. 25ಕ್ಕೆ ವಿಚಾರಣೆಯನ್ನು ಮುಂದೂಡಿತು.

ಅಧಿಕ ತೆರಿಗೆ ವಿಧಿಸುವ ಬಿಬಿಎಂಪಿ ನಿಯಮ ಪ್ರಶ್ನಿಸಿ ಹೋಟೆಲ್‌, ಕಲ್ಯಾಣ ಮಂಟಪಗಳ ಮಾಲೀಕರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠವು, ಬಿಬಿಎಂಪಿ ನಿಯಮವು ಅಕ್ರಮ ಎಂದು 2013ರ ಅ. 24ರಂದು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು 2019ರ ಫೆ. 15ರಂದು ವಜಾಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.