
ಟಿಡಿಪಿ ಕಾರ್ಯಕರ್ತರಿಂದ ಮಾಜಿ ಸಚಿವ, YSRCP ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ
ಇಬ್ರಾಹಿಂಪಟ್ಟಣ: ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ವೈಎಸ್‌ಆರ್‌ಸಿಪಿಯ ನಾಯಕ ಜೋಗಿ ರಮೇಶ್ ಅವರ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನ ಮನೆಗೆ ಟಿಡಿಪಿ ಕಾರ್ಯಕರ್ತರು ಬೆಂಕಿ ಇಟ್ಟಿದ್ದಾರೆ.
ಜೋಗಿ ರಮೇಶ್ ಅವರು ಟಿಡಿಪಿ ನಾಯಕ ನಾರಾ ಲೋಕೇಶ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಟಿಡಿಪಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.
ರಮೇಶ್ ಹೇಳಿಕೆಯಿಂದ ಕೆರಳಿದ್ದ ಟಿಡಿಪಿಯ ನೂರಾರು ಕಾರ್ಯಕರ್ತರು ಅವರ ಮನೆಗೆ ನುಗ್ಗಿದ್ದರು. ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರಾದರೂ ಕೆಲವು ಕಿಡಿಗೇಡಿಗಳು ಮನೆ ಒಳಗೆ ನುಗ್ಗಿ ಬಾಲ್ಕನಿ ಮತ್ತೆ ಇತರ ಕಡೆಗೆ ಬೆಂಕಿ ಇಟ್ಟಿದ್ದಾರೆ.
ಮನೆಯ ಬಳಿ ನಿಲ್ಲಿಸಲಾಗಿದ್ದ ಕಟೌಟ್‌ಗಳನ್ನು ಧ್ವಂಸ ಮಾಡಿರುವ ಕಾರ್ಯಕರ್ತರು ರಮೇಶ್ ವಿರುದ್ಧ ಘೋಷಣೆ ಕೂಗಿದರು. ಸದ್ಯ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಜೋಗಿ ರಮೇಶ್, ನನ್ನ ಕೊಲೆಗೆ ಯತ್ನಿಸಲಾಗಿದೆ. ಇದರ ಹಿಂದೆ ಸಿಎಂ ಚಂದ್ರಬಾಬು ನಾಯ್ಡು ಹಾಗೂ ನಾರಾ ಲೋಕೇಶ್ ಇದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಅವರು ಕೊಲೆ ಯತ್ನ ದೂರನ್ನೂ ದಾಖಲಿಸಿದ್ದಾರೆ.
ಸಿಎಂ ಚಂದ್ರಬಾಬು ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಸಚಿವ ಹಾಗೂ ವೈಎಸ್‌ಆರ್‌ಪಿಯ ಮತ್ತೊಬ್ಬ ನಾಯಕ ಸಚಿವ ರಾಮ್ ಬಾಬು ಅವರನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ವೈಎಸ್‌ಆರ್‌ಸಿಪಿ ನಾಯಕ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.