ADVERTISEMENT

ಯಾರೇ ಬಂದರೂ ಬದುಕು ಬದಲಾಗದು; ಅಸ್ಸಾಂನ ಚಹಾ ತೋಟದ ಕಾರ್ಮಿಕರ ಅಳಲು

ಕಡಿಮೆ ಕೂಲಿಯ ಪಡಿಪಾಟಲು

ಸುಮೀರ್‌ ಕರ್ಮಾಕರ್‌
Published 18 ಮಾರ್ಚ್ 2021, 22:13 IST
Last Updated 18 ಮಾರ್ಚ್ 2021, 22:13 IST
ತೀನ್‌ಖರಿಯಾ ಚಹಾ ತೋಟದಲ್ಲಿ ಕಾರ್ಮಿಕರು
ತೀನ್‌ಖರಿಯಾ ಚಹಾ ತೋಟದಲ್ಲಿ ಕಾರ್ಮಿಕರು   

ಧೇಕಿಯಾಜುಲಿ (ಅಸ್ಸಾಂ): ತೀನ್‌ಖರಿಯಾ ಚಹಾ ತೋಟದ ಜುಲಿಯಾ ವಿಭಾಗದಲ್ಲಿ ಎಲೆ ಕೀಳುವ ಕೆಲಸ ಮಾಡುವ ಜಾಸ್ಮಿನ್‌ ಬರ್ಲಾಗೆ ಇದು ವಿರಾಮವಿಲ್ಲದ ದುಡಿಮೆಯ ದಿನಗಳು. ಇದು ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಸ್ಥಳ. ಚಳಿಗಾಲ ಕಳೆದು, ಹೊಸ ಋತುವಿನ ಮೊದಲ ಮಳೆ ಸುರಿದ ಕಾರಣಕ್ಕೆ ಎಲೆ ಕೀಳುವ ಕೆಲಸ ವೇಗ ಪಡೆದುಕೊಂಡಿದೆ.

ಈಗ ಅಸ್ಸಾಂನಲ್ಲಿ ಚುನಾವಣೆ ಸಮಯ. ಆದರೆ, 42 ವರ್ಷದ ಜಾಸ್ಮಿನ್‌ಗೆ ಮಾತ್ರ ಚುನಾವಣೆ ಬಗ್ಗೆ ಮಾತನಾಡುವುದಕ್ಕೇ ಇಷ್ಟ ಇಲ್ಲ. ‘ಚುನಾವಣೆಯಿಂದ ಏನಾಗುತ್ತದೆ? ನಮ್ಮ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಳ್ಳುವುದಿಲ್ಲ’ ಎಂದು ಎಲೆಗಳಿಂದ ತುಂಬಿದ ಬುಟ್ಟಿಯನ್ನು ಖಾಲಿ ಮಾಡಲು ಆತುರಾತುರವಾಗಿ ಹೋಗುತ್ತಾ ಜಾಸ್ಮಿನ್ ಹೇಳುತ್ತಾರೆ. ಅವರನ್ನೇ ನೋಡುತ್ತಿದ್ದ ಇನ್ನೊಬ್ಬ ಮಹಿಳೆ ಬಿಸ್ವಾಸಿ ಭದ್ರ ‘ಹೌದೌದು’ ಎಂಬಂತೆ ತಲೆಯಾಡಿಸಿದರು.

‘ನಮಗೆ ಸಿಗೋದು ದಿನಕ್ಕೆ ₹167. ಈ ಹಣದಲ್ಲಿ ಜೀವನ ನಡೆಸೋದು ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ. ‘ಎಲ್‌ಪಿಜಿ ಸಿಲಿಂಡರ್‌ ದರ ಈಗ ₹800 ಆಗಿದೆ. ಇಬ್ಬರು ಮಕ್ಕಳಿಗೆ ತಿಂಗಳಿಗೆ ತಲಾ ₹270 ಶಾಲಾ ಶುಲ್ಕ ಕಟ್ಟಬೇಕು. ಪ್ರತಿ ವರ್ಷ ತಲಾ ₹3,000 ಪ್ರವೇಶ ಶುಲ್ಕ ಕೊಡಬೇಕು. ನನ್ನ ಗಂಡನಿಗೆ ಹೊರಗೆ ಕೆಲಸಕ್ಕೆ ಹೋದರೆ ದಿನಕ್ಕೆ ₹270 ಸಿಗುತ್ತದೆ. ಆದರೆ ಆತನಿಗೆ ದಿನವೂ ಕೆಲಸ ಸಿಗೋದಿಲ್ಲ’ ಎಂದು ಬಿಸ್ವಾಸಿ ತಮ್ಮ ಅಳಲು ತೋಡಿಕೊಂಡರು.

ADVERTISEMENT

‘ಕಾಂಗ್ರೆಸ್‌, ಬಿಜೆಪಿ ಎಲ್ಲವೂ ಒಂದೇ. ಚುನಾವಣೆಗೆ ಮೊದಲು ಭರವಸೆ ಕೊಡುತ್ತಾರೆ. ಚುನಾವಣೆ ಬಳಿಕ ನಮ್ಮನ್ನು ಮರೆತುಬಿಡುತ್ತಾರೆ’ ಎಂದು ಬಿಸ್ವಾಸಿ ನಿಟ್ಟುಸಿರಿಟ್ಟರು.

ತೀನ್‌ಖರಿಯಾ ಚಹಾ ತೋಟ 210 ಹೆಕ್ಟೇರ್‌ ವ್ಯಾಪಿಸಿದೆ. ಇಲ್ಲಿ, 454 ಕಾಯಂ ಕೆಲಸಗಾರರಿದ್ದಾರೆ. ಮತದಾರರ ಸಂಖ್ಯೆ 1,300. ದಿನದ ಕೂಲಿಯನ್ನು ₹351ಕ್ಕೆ ಏರಿಸಬೇಕು ಎಂಬ ಅವರ ಬೇಡಿಕೆ ವರ್ಷಗಳಿಂದ ಹಾಗೆಯೇ ಇದೆ. ಅಸ್ಸಾಂನಲ್ಲಿ 850ಕ್ಕೂ ಹೆಚ್ಚು ದೊಡ್ಡ ಚಹಾ ತೋಟಗಳಿವೆ. ದೇಶದ ಚಹಾ ಉತ್ಪಾದನೆಯಲ್ಲಿ ಅಸ್ಸಾಂನ ಪಾಲು ಶೇ 51ಕ್ಕೂ ಹೆಚ್ಚು. ಅಸ್ಸಾಂ ಚಹಾಕ್ಕೆ ಜಾಗತಿಕ ಮಾನ್ಯತೆ ಇದೆ. ಇದರ ಪರಿಮಳ ಮತ್ತು ಬಣ್ಣಕ್ಕೆ ದೊಡ್ಡ ಮನ್ನಣೆ ಇದೆ. ಆದರೆ, ಚಹಾ ತೋಟದ ಕಾರ್ಮಿಕರ ಸಂಕಟವನ್ನು ಮಾತ್ರ ಕೇಳುವವರಿಲ್ಲ.

ಅಸ್ಸಾಂನ 126 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಚಹಾ ತೋಟದ ಕಾರ್ಮಿಕರೇ ನಿರ್ಣಾಯಕ. ಇವರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು ಇದೆ.

ಧೇಕಿಯಾಜುಲಿ ಕ್ಷೇತ್ರವು 2011ರಲ್ಲಿ ಕಾಂಗ್ರೆಸ್‌ನ ಹಾಬುಲ್‌ ಚೌಧುರಿಯನ್ನು ಆಯ್ಕೆ ಮಾಡಿತ್ತು. 2016ರಲ್ಲಿ ಬಿಜೆಪಿಯ ಅಶೋಕ್‌ ಸಿಂಘಾಲ್‌ ಗೆದ್ದರು.

2014ರ ಲೋಕಸಭಾ ಚುನಾವಣೆ ವರೆಗೆ ಚಹಾ ತೋಟದ ಕಾರ್ಮಿಕರ ಮತಗಳು ಕಾಂಗ್ರೆಸ್‌ಗೆ ಕಟ್ಟಿಟ್ಟ ಬುತ್ತಿ ಯಾಗಿತ್ತು. ಈಗ ಅದು ಬಿಜೆಪಿಗೆ ವರ್ಗಾವಣೆಯಾಗಿದೆ.

ದಿನಗೂಲಿಯೇ ಈ ಚುನಾವಣೆಯ ಮುಖ್ಯ ವಿಷಯ ಆಗಬಹುದು ಎಂಬುದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಅರಿವಾಗಿದೆ. ಹಾಗಾಗಿಯೇ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದಿನಗೂಲಿಯನ್ನು ₹365ಕ್ಕೆ ಏರಿಸುವ ಭರವಸೆಯನ್ನು ಫೆ. 14ರಂದು ಶಿವಸಾಗರದಲ್ಲಿ ನಡೆದ ರ್‍ಯಾಲಿಯಲ್ಲಿ ಅವರು ಕೊಟ್ಟಿದ್ದಾರೆ. ಕೆಲ ದಿನಗಳ ಬಳಿಕ ದಿನಗೂಲಿಯನ್ನು ಬಿಜೆಪಿ ಸರ್ಕಾರವು ₹217ಕ್ಕೆ ಏರಿಸಿತು. ಆದರೆ, ಚಹಾ ಎಸ್ಟೇಟ್‌ ಮಾಲೀಕರು ಕೋರ್ಟ್‌ಗೆ ಹೋದ ಕಾರಣ, ಈ ಏರಿಕೆಗೆ ಗುವಾಹಟಿ ಹೈಕೋರ್ಟ್‌ ತಡೆ ನೀಡಿದೆ. ದಿನಗೂಲಿಯನ್ನು ಸರ್ಕಾರ ನಿಗದಿ ಮಾಡುತ್ತದೆ, ಆದರೆ ಚಹಾ ತೋಟದ ಮಾಲೀಕರೇ ಅದನ್ನು ಪಾವತಿಸಬೇಕಾಗುತ್ತದೆ.

ಎಸ್‌ಟಿ ಮಾನ್ಯತೆ ಗಗನಕುಸುಮ

19ನೇ ಶತಮಾನದಲ್ಲಿ ಮಧ್ಯ ಪ್ರದೇಶ, ಬಿಹಾರ, ಒಡಿಶಾ ಮತ್ತು ಈಗಿನ ಜಾರ್ಖಂಡ್‌ನಿಂದ ಕಾರ್ಮಿಕರನ್ನು ಕರೆ ತರಲಾಗಿತ್ತು. ಈಗ ಅವರೆಲ್ಲರೂ ಅಸ್ಸಾಂನ ಕಾಯಂ ನಿವಾಸಿಗಳು. ಅವರ ಸಂಬಂಧಿಕರು ಈಗಲೂ ಆ ರಾಜ್ಯಗಳಲ್ಲಿಯೇ ಇದ್ದಾರೆ. ಅವರಿಗೆ ಪರಿಶಿಷ್ಟ ಪಂಗಡದ (ಎಸ್‌ಟಿ) ಮಾನ್ಯತೆ ಇದೆ. ಅದೇ ರೀತಿ ತಮಗೂ ಪರಿಶಿಷ್ಟ ಪಂಗಡ ಮಾನ್ಯತೆ ಬೇಕು ಎಂಬುದು ಅಸ್ಸಾಂನಲ್ಲಿ ನೆಲೆಯಾಗಿರುವವರ ಬೇಡಿಕೆ. ಈ ಬೇಡಿಕೆಯು ಕಾಂಗ್ರೆಸ್‌ ಸರ್ಕಾರ ಇದ್ದಾಗಲಾಗಲಿ ಬಿಜೆಪಿ ಸರ್ಕಾರ ಬಂದಾಗಲಾಗಲಿ ಈಡೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.