ADVERTISEMENT

ಶಿಕ್ಷಕರ ಕೊರತೆ; ವಿದ್ಯಾರ್ಥಿನಿಯರಿಂದ 65 ಕಿ.ಮೀ ಪಾದಯಾತ್ರೆ

ಅರುಣಾಚಲ ಪ್ರದೇಶದ ಕೆಸ್ಸಾಂಗ್‌ ಜಿಲ್ಲೆಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 17:10 IST
Last Updated 15 ಸೆಪ್ಟೆಂಬರ್ 2025, 17:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾನಗರ, ಅರುಣಾಚಲ ಪ್ರದೇಶ: ಇಲ್ಲಿನ ಪಕ್ಕೆ ಕೆಸ್ಸಾಂಗ್‌ ಜಿಲ್ಲೆಯ ನಂಗ್‌ನ್ಯೊ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ)ದಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ 90 ವಿದ್ಯಾರ್ಥಿನಿಯರು 65 ಕಿ.ಮೀ ಪಾದಯಾತ್ರೆ ನಡೆಸಿದರು.

‘ಶಾಲಾ ಸಮವಸ್ತ್ರ ಧರಿಸಿಕೊಂಡೇ, ತಮ್ಮ ಗ್ರಾಮದಿಂದ ಭಾನುವಾರ ಹೊರಟ ವಿದ್ಯಾರ್ಥಿಗಳು ಇಡೀ ರಾತ್ರಿ ಕಾಲ್ನಡಿಗೆಯ ಮೂಲಕ ಜಿಲ್ಲಾ ಕೇಂದ್ರಕ್ಕೆ ಸೋಮವಾರ ಬೆಳಿಗ್ಗೆ ತಲುಪಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕ್ಕಳು ರಾತ್ರಿಯಿಡೀ ಪಾದಯಾತ್ರೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕೆಲವು ವಿದ್ಯಾರ್ಥಿಗಳು ಛತ್ರಿ, ಬ್ಯಾಗ್‌ ಹಿಡಿದು ನಡೆಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

ತರಗತಿಗಳು ಆರಂಭಗೊಂಡು ಅರ್ಧ ವರ್ಷ ಕಳೆದಿವೆ. ಆದರೂ ರಾಜಕೀಯ ಶಾಸ್ತ್ರ ಹಾಗೂ ಭುಗೋಳಶಾಸ್ತ್ರಕ್ಕೆ ಯಾವುದೇ ಅಧ್ಯಾಪಕರು ಇಲ್ಲ. ಈ ಬಗ್ಗೆ ಹಲವು ಸಲ ಮನವಿ ಮಾಡಿದರೂ, ಯಾವುದೆ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಪಾದಯಾತ್ರೆ ನಡೆಸುವಂತಾಯಿತು ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. 

‘ಶಿಕ್ಷಕರು ಇಲ್ಲದ ಶಾಲೆಯು ಬರೀ ಕಟ್ಟಡವಾಗಿದೆ’ ಎಂದು ಭಿತ್ತಿಪತ್ರ ಪ್ರದರ್ಶಿಸಿ, ಘೋಷಣೆ ಕೂಗಿದರು.

ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ತಕ್ಷಣವೇ ಶಿಕ್ಷಕರ ನೇಮಕ ಮಾಡಲಾಗುವುದು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೀಪಕ್‌ ತಯೆಂಗ್‌ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪ‍ಡೆದರು. ಶಿಕ್ಷಣ ಇಲಾಖೆಯು ಎರಡು ವಿಶೇಷ ವಾಹನಗಳ ಮೂಲಕ ಮಕ್ಕಳನ್ನು ಮರಳಿ ಗ್ರಾಮಕ್ಕೆ ಕಳುಹಿಸಿಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.