ಅಮಾನತು
ಕಟ್ನಿ: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತನ್ನ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಬರ್ವಾರಾ ಬ್ಲಾಕ್‌ನ ಖಿರ್ಹಾನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಾಲ್ ನವೀನ್ ಪ್ರತಾಪ್ ಸಿಂಗ್ ಅವರ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಗೊಂಡಿತ್ತು.
ವಿಡಿಯೊ ಗಮನಕ್ಕೆ ಬಂದ ಕೂಡಲೇ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಅವರು ಜಿಲ್ಲಾ ಶಿಕ್ಷಣ ಅಧಿಕಾರಿ ಒಪಿ ಸಿಂಗ್ ಅವರಿಗೆ ಸೂಚಿಸಿದ್ದರು.
ದುರ್ನಡತೆ, ಮಕ್ಕಳಿಗೆ ಮದ್ಯ ಕುಡಿಯಲು ಪ್ರೋತ್ಸಾಹಿಸುವುದು ಮತ್ತು ಶಿಕ್ಷಕರ ಘನತೆಗೆ ಕುಂದು ತಂದ ಆರೋಪದ ಮೇಲೆ ಸಿಂಗ್ ಅವರನ್ನು ಮಧ್ಯಪ್ರದೇಶ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳ ಅಡಿಯಲ್ಲಿ ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಚಿಕ್ಕ ಹುಡುಗರಿಗೆ ಕಪ್‌ಗಳಲ್ಲಿ ಪಾನೀಯ ನೀಡುತ್ತಿರುವುದನ್ನು ಸೆರೆಯಾಗಿದೆ. ಪಾನೀಯ ಸೇವಿಸುವ ಮೊದಲು ನೀರನ್ನು ಬೆರೆಸಿ ಎಂದು ಇನ್ನೊಬ್ಬ ಹೇಳುವುದು ವಿಡಿಯೊದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.