ADVERTISEMENT

ದಕ್ಷಿಣ ಏಷ್ಯಾದ ಹಿತಾಸಕ್ತಿ ತಿಳಿಸಲು ಜಿ–20 ಅಧ್ಯಕ್ಷ ಸ್ಥಾನ ಬಳಕೆ: ಜೈಶಂಕರ್

ನವದೆಹಲಿಯಲ್ಲಿ ಮೂರು ದಿನಗಳ ‘ಜಾಗತಿಕ ತಂತ್ರಜ್ಞಾನ ಶೃಂಗಸಭೆ’

ಪಿಟಿಐ
Published 29 ನವೆಂಬರ್ 2022, 10:37 IST
Last Updated 29 ನವೆಂಬರ್ 2022, 10:37 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ನವದೆಹಲಿ: ದೇಶಕ್ಕೆ ಲಭಿಸಿರುವ ಜಿ–20 ಅಧ್ಯಕ್ಷೀಯ ಸ್ಥಾನವನ್ನು ದಕ್ಷಿಣ ಏಷ್ಯಾದ ಹಿತಾಸಕ್ತಿಗಳು ಹಾಗೂ ಆತಂಕಗಳನ್ನು ಜಗತ್ತಿನ ಮುಂದಿಡಲು ಭಾರತ ಬಳಸಿಕೊಳ್ಳಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಮಂಗಳವಾರ ಹೇಳಿದರು.

ನಗರದಲ್ಲಿ ಆರಂಭವಾಗಿರುವ ಮೂರು ದಿನಗಳ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಮಾತನಾಡಿದ ಅವರು,‘ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾಹಿತಿ ಎಲ್ಲಿ ಸಂಗ್ರಹವಾಗುತ್ತದೆ? ಈ ಮಾಹಿತಿಯನ್ನು ಯಾರು ಹಾಗೂ ಯಾತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ ಹೆಚ್ಚು ಅರಿತುಕೊಂಡಿದೆ’ ಎಂದರು.

‘ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ, ದೇಶದ ಪ್ರಗತಿಗೂ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಯೊಂದಿಗೆ ಸಂಬಂಧ ಇದೆ ಎಂದು ಸ್ಪಷ್ಟವಾಗುತ್ತದೆ. ಹೀಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಬೆಳವಣಿಗೆಗಳ ಬಗ್ಗೆ ದೇಶವು ಅಸ್ಪಷ್ಟ ನಿಲುವು ಹೊಂದುವುದು ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

‘ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳಿಗೆ ಹಾಗೂ ರಾಜಕೀಯ ನಿರ್ಧಾರಗಳಿಗೂ ಸಂಬಂಧ ಇದೆ. ಭಾರತವು ಜಾಗತಿಕವಾಗಿ ಮಹತ್ವದ ಪಾತ್ರ ವಹಿಸಲು ಹಾಗೂ ವಿವಿಧ ರಾಷ್ಟ್ರಗಳೊಂದಿಗೆ ಮೈತ್ರಿ ಸಾಧಿಸಲು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದೆ’ ಎಂದರು.

‘ಒಂದು ದೇಶ ಆರ್ಥಿಕವಾಗಿ ಸದೃಢವಾಗಲು ತಂತ್ರಜ್ಞಾನ ಅಗತ್ಯ. ಇದೇ ಕಾರಣಕ್ಕೆ ಜಗತ್ತಿನ ಬೃಹತ್‌ ರಾಷ್ಟ್ರಗಳು ತಾಂತ್ರಿಕವಾಗಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸತತ ಪ್ರಯತ್ನದಲ್ಲಿರುತ್ತವೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.