ADVERTISEMENT

ವಾರಾಣಸಿ: ಜೈ ಶ್ರೀರಾಮ್‌ ಎನ್ನದ ಬಾಲಕನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
   

ವಾರಾಣಸಿ:ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ 15 ವರ್ಷದ ಬಾಲಕನಿಗೆ ನಾಲ್ವರು ಸೇರಿಕೊಂಡು ಬೆಂಕಿ ಹಚ್ಚಿದ್ದಾರೆ ಎಂದು ‘ಆಜ್‌ ತಕ್‌’ ಸುದ್ದಿ ವಾಹಿನಿ ಸೋಮವಾರ ವರದಿ ಮಾಡಿದೆ.

ಬಾಲಕನನ್ನು ಇಲ್ಲಿನ ಕಾಶಿ ಕಬೀರ್‌ ಚೌರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗದ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆ ಬಾಲಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದು, ಆಸ್ಪತ್ರೆಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಆತನ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸೇತುವೆ ಮೇಲೆ ನಡೆದುಕೊಂಡು ಬರುತ್ತಿರುವಾಗ ನಾಲ್ವರು ನನ್ನನ್ನು ಅಪಹರಿಸಿದರು. ಇಬ್ಬರು ನನ್ನ ಕೈಗಳನ್ನು ಕಟ್ಟಿ ಹಾಕಿದರು. ಮೂರನೆಯ ವ್ಯಕ್ತಿ ನನ್ನ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿದ. ನಂತರ ಎಲ್ಲರೂ ಅಲ್ಲಿಂದ ಪರಾರಿಯಾದರು’ ಎಂದು ಬಾಲಕ ತಿಳಿಸಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

‘ಬಾಲಕ ಮನೆಗೆ ತಲುಪುವಷ್ಟರಲ್ಲಿ ಆತನ ದೇಹದ ಭಾಗಗಳು ಸಾಕಷ್ಟು ಸುಟ್ಟು ಹೋಗಿದ್ದವು’ ಎಂದಿರುವ ಪೊಲೀಸರು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದರೆ, ಇದನ್ನು ಅನುಮಾನಾಸ್ಪದ ಪ್ರಕರಣವಾಗಿ ನೋಡುತ್ತಿರುವ ಪೊಲೀಸರು, ‘ಜೈ ಶ್ರೀರಾಮ್‌ ಎಂದು ಘೋಷಣೆ ಕೂಗದ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳುವಂತೆ ಬಾಲಕ ಮತ್ತು ಆತನ ತಾಯಿಯ ಮೇಲೆ ಕೆಲವರು ಒತ್ತಡ ಹೇರಿದ್ದಾರೆ’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.