ADVERTISEMENT

ತಹಶೀಲ್ದಾರ್‌ ವಾಹನ–ಬೈಕ್‌ ಡಿಕ್ಕಿ: ಮೃತ ದೇಹವನ್ನು 30ಕಿ.ಮೀವರೆಗೂ ಎಳೆದೊಯ್ದ ಚಾಲಕ

ಪಿಟಿಐ
Published 21 ಡಿಸೆಂಬರ್ 2024, 13:23 IST
Last Updated 21 ಡಿಸೆಂಬರ್ 2024, 13:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬಹರಾಯಿಚ್‌: ಉತ್ತರ ಪ್ರದೇಶದ ನಾನ್ಪಾರಾದ ತಹಶೀಲ್ದಾರ್‌ ಅವರ ಸರ್ಕಾರಿ ವಾಹನವು ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು, ಆತನ ಮೃತ ದೇಹವನ್ನು 30 ಕಿ.ಮೀವರೆಗೂ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಪಯಾಗ್‌ಪುರದ ನಿವಾಸಿ ನರೇಂದ್ರ ಕುಮಾರ್‌ ಹಲ್ದಾರ್‌ (35) ಎಂದು ಗುರುತಿಸಲಾಗಿದೆ. ನಾನ್ಪಾರಾ– ಬಹರಾಯಿಚ್‌ ರಸ್ತೆಯಲ್ಲಿ ಗುರುವಾರ ಸಂಜೆ ಈ ಅಪಘಾತ ಸಂಭವಿಸಿದೆ.

ADVERTISEMENT

‘ಅಪಘಾತದ ವೇಳೆ ತಹಶೀಲ್ದಾರ್‌ ವಾಹನಕ್ಕೆ ಹಲ್ದಾರ್‌ ಅವರ ಮೃತ ದೇಹ ಸಿಲುಕಿಕೊಂಡಿತ್ತು. ವಾಹನವು ಸುಮಾರು 30 ಕಿ.ಮೀವರೆಗೆ ದೇಹವನ್ನು ಎಳೆದುಕೊಂಡು ಹೋಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ತಿಳಿಸಿದ್ದಾರೆ.

ತಹಶೀಲ್ದಾರ್‌ ಅಮಾನತಿಗೆ ಶಿಫಾರಸು:

ಅಪಘಾತ ಸಂಭವಿಸಿದಾಗ ವಾಹನದಲ್ಲಿದ್ದರು ಎಂದು ಹೇಳಲಾಗುವ ತಹಶೀಲ್ದಾರ್‌ ಶೈಲೇಶ್‌ ಕುಮಾರ್‌ ಅವಸ್ತಿ ಅವರನ್ನು ಜಿಲ್ಲಾಧಿಕಾರಿ ಮೋನಿಕಾ ರಾಣಿ ಅಮಾತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ವಾಹನದ ಚಾಲಕ ಮೆರಾಜ್‌ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ತನಿಖೆ:

‘ಅಪಘಾತಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಯುತ್ತಿದ್ದು, ಹೇಗೆ ಅಪಘಾತ ಸಂಭವಿಸಿರಬಹುದು ಎಂಬುದನ್ನು ಪರಿಶೀಲಿಸಲಾಗುತ್ತಿದೆ. 30 ಕಿ.ಮೀ ರಸ್ತೆ ಮಾರ್ಗದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಅಪಘಾತದಲ್ಲಿ ಮೃತಪಟ್ಟಿರುವ ನರೇಂದ್ರ ಕುಮಾರ್‌ ಹಲ್ದಾರ್‌ ಅವರ ಕುಟುಂಬದ ಸಂಬಂಧಿಗಳು ದಾಖಲಿಸಿರುವ ದೂರಿನಲ್ಲಿ, ತಹಶೀಲ್ದಾರ್‌ ವಾಹನವನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.