
ದುಬೈ: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್’ ಶುಕ್ರವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಮೃತಪಟ್ಟಿದ್ದಾರೆ.
ನಮಾಂಶ್ ಸ್ಯಾಲ್ ಅವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಟಿಯಾಲ್ಕರ್ ಮೂಲದವರಾಗಿದ್ದು, ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಆಗಿದ್ದರು.
ನಮಾಂಶ್ ಅವರ ತಂದೆ ಜಗನ್ನಾಥ ಸ್ಯಾಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಪ್ರಾಂಶುಪಾಲ ವೃತ್ತಿಯ ಕಡೆಗೆ ಮರಳಿ, ನಿವೃತ್ತರಾಗಿದ್ದಾರೆ. ನಮಾಂಶ್ ಅವರ ಪತ್ನಿ ಅಫ್ಸಾನ್ ಕೂಡ ಕೋಲ್ಕತ್ತದಲ್ಲಿ ವಾಯುಪಡೆಯ ಅಧಿಕಾರಿಯಾಗಿದ್ದಾರೆ. 2014ರಲ್ಲಿ ಮದುವೆಯಾಗಿದ್ದ ಅವರಿಗೆ ಆರು ವರ್ಷದ ಮಗಳಿದ್ದಾಳೆ.
ಸುಜನ್‌ಪುರ್ ತಿರಾದಲ್ಲಿನ ಸೈನಿಕ ಶಾಲೆಯ 2005ನೇ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ನಮಾಂಶ್, ಅಲ್ಲಿನ ಚೆನಾಬ್ ಹೌಸ್‌ನ ನಾಯಕರಾಗಿದ್ದರು. ಅಲ್ಲಿದ್ದಾಗ ಉತ್ತಮ ಕ್ರೀಡಾಪಟುವಾಗಿ ಕೂಡ ಗುರುತಿಸಿಕೊಂಡಿದ್ದರು.
ಸೈನಿಕ ಶಾಲೆಯ ನಂತರ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್‌ಡಿಎ) ಸೇರಿದ್ದರು. ಅಲ್ಲಿ ಹಂಟರ್ ಸ್ಕ್ವಾಡ್ರನ್‌ನೊಂದಿಗೆ ತರಬೇತಿ ಪಡೆದಿದ್ದರು.
ನಮಾಂಶ್ ಸ್ಯಾಲ್ ಅವರು 2009ರ ಡಿಸೆಂಬರ್ 24ರಂದು ಭಾರತೀಯ ವಾಯುಪಡೆಗೆ ಸೇರಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ಬಡ್ತಿ ಪಡೆದಿದ್ದರು. ನಂತರ ವಿಂಗ್ ಕಮಾಂಡರ್ ಹುದ್ದೆಗೇರಿದ್ದರು. ಮಿಗ್ -21 ಯುದ್ದ ವಿಮಾನದ ತರಬೇತಿ ಮತ್ತು ಸುಖೋಯ್ ಎಸ್ -30 ಎಂಕೆಐಗಳನ್ನು ಹಾರಿಸಿದ ಅನುಭವ ಹೊಂದಿದ್ದರು.
ಏರ್ ಶೋಗೂ ಮುನ್ನ ತಮಿಳುನಾಡಿನ ಸುಲೂರು ವಾಯುಪಡೆ ನಿಲ್ದಾಣದಲ್ಲಿ ನಮಾಂಶ್ ಸ್ಯಾಲ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ತೇಜಸ್ ವಿಮಾನವನ್ನು ನಿರ್ವಹಿಸುವ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಶುಕ್ರವಾರ ಮಧ್ಯಾಹ್ನ 2.10ರ ಸುಮಾರಿಗೆ ಏರ್‌ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ತೇಜಸ್ ವಿಮಾನ ಪತನವಾಗುವ ಮುನ್ನ ಅದನ್ನು ಜನರಿಂದ ದೂರ ತೆಗೆದುಕೊಂಡು ಹೋಗುವ ಮೂಲಕ ತಮ್ಮ ಪ್ರಾಣ ಸಮರ್ಪಿಸಿ, ಅಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.