ADVERTISEMENT

ಏಕಮುಖ ಸ್ಪರ್ಧೆ ಬದಲಿಸಿದ ತೇಜಸ್ವಿ

ಅಭಯ್ ಕುಮಾರ್
Published 30 ಅಕ್ಟೋಬರ್ 2020, 19:31 IST
Last Updated 30 ಅಕ್ಟೋಬರ್ 2020, 19:31 IST
ಮುಜಪ್ಫರಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ತೇಜಸ್ವಿ ಯಾದವ್ ಶುಕ್ರವಾರ ನಡೆಸಿದ ರ್‍ಯಾಲಿಯಲ್ಲಿ ಯುವಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು -ಪಿಟಿಐ ಚಿತ್ರ
ಮುಜಪ್ಫರಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ತೇಜಸ್ವಿ ಯಾದವ್ ಶುಕ್ರವಾರ ನಡೆಸಿದ ರ್‍ಯಾಲಿಯಲ್ಲಿ ಯುವಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು -ಪಿಟಿಐ ಚಿತ್ರ   

ಪಟ್ನಾ: ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯನ್ನು ಘೋಷಿಸಿದಾಗ, ಸ್ಪರ್ಧೆ ಏಕಪಕ್ಷೀಯವಾಗಿತ್ತು. ನಿತೀಶ್ ಕುಮಾರ್ ಅವರೇ ಸತತ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪರಿಸ್ಥಿತಿ ಇತ್ತು. ಆದರೆ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿಯ ತೇಜಸ್ವಿ ಯಾದವ್ ಕಳೆದ 15 ದಿನಗಳಲ್ಲಿ ಇಡೀ ಲೆಕ್ಕಾಚಾರವನ್ನು ತಿರುಗುಮುರುಗು ಮಾಡಿದ್ದಾರೆ. ಏಕಪಕ್ಷೀಯವಾಗಬಹುದಾಗಿದ್ದ ಚುನಾವಣೆಯಲ್ಲಿ ಎನ್‌ಡಿಎಗೆ ಸಮಾನ ಎದುರಾಳಿಯಾಗಿದ್ದಾರೆ.

‘ಕಳೆದ ಕೆಲವು ದಿನಗಳಲ್ಲಿ, ಅತ್ಯಂತ ಕ್ಷಿಪ್ರವಾಗಿ ಪಕ್ಷಗಳ ಬಲಾಬಲವನ್ನು ಬದಲಿಸಿದ್ದು ಏನು’ ಎಂಬುದರ ಬಗ್ಗೆ ತೇಜಸ್ವಿ ಅವರ ಎದುರಾಳಿಗಳು ಸಂಶೋಧನೆ ಆರಂಭಿಸಿದ್ದಾರೆ.

ಎರಡೂ ಕಡೆಯ ನಾಯಕರು ಅನುಸರಿಸುತ್ತಿರುವ ಚುನಾವಣಾ ತಂತ್ರಗಳಲ್ಲಿ ಈ ವ್ಯತ್ಯಾಸವಿದೆ. ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಅವರು ಹಳೆಯ ವಿಷಯಗಳಿಗೆ ಅಂಟಿಕೊಂಡಿದ್ದಾರೆ. ಲಾಲು ಪ್ರಸಾದ್ ಅವರ ಆಡಳಿತದ ಅವಧಿಯ ‘ಜಂಗಲ್‌ ರಾಜ್‌’ನ ನೆನಪನ್ನೇ ಮೆಲುಕು ಹಾಕುತ್ತಿದ್ದಾರೆ. ಆದರೆ ತೇಜಸ್ವಿ ಅವರು ‘ಕಮಾಯಿ, ದವಾಯಿ, ಪಢಾಯಿ’ (ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣ) ಕುರಿತು ಮಾತನಾಡುತ್ತಿದ್ದಾರೆ. ತೇಜಸ್ವಿ, ಜನರ ಮನಸ್ಸಿಗೆ ಹತ್ತಿರದವಿಷಯಗಳ ಮೂಲಕ ಮತದಾರರ ಮನಗೆಲ್ಲಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯಶಾಸ್ತ್ರ ಪರಿಣತರು ವಿಶ್ಲೇಷಿಸುತ್ತಾರೆ.

ADVERTISEMENT

‘ಮತದಾರರಿಗೆ ಹತ್ತಿರವಾಗುವ ಈ ವಿಧಾನವನ್ನು ತೇಜಸ್ವಿ ಅವರಿಗೆ ಯಾರೇ ಹೇಳಿಕೊಟ್ಟಿರಲಿ, ಅವರನ್ನು ಹುಡುಕಿ ಅಭಿನಂದಿಸಬೇಕು. ಈವರೆಗೆ ಬಿಹಾರದ ಚುನಾವಣೆಯನ್ನು ಯಾರೂ ಉದ್ಯೋಗ, ವಲಸೆ, ಆರೋಗ್ಯ, ಶಿಕ್ಷಣದ ವಿಚಾರಗಳನ್ನು ಇಟ್ಟುಕೊಂಡು ಎದುರಿಸಿರಲಿಲ್ಲ. ಈ ಹಿಂದಿನ ಎಲ್ಲಾ ಚುನಾವಣೆಗಳು ಜಾತಿ ಮತ್ತು ಧರ್ಮಾಧಾರಿತ ವಿಭಜನೆಯ ಮೂಲಕವೇ ನಡೆದಿದ್ದವು. ತೇಜಸ್ವಿ ಅವರು ಹೊಸ ಮಾದರಿ ಹಾಕಿಕೊಟ್ಟಿದ್ದಾರೆ’ ಎಂದು ಹಿರಿಯ ಪತ್ರಕರ್ತ ರಾಕೇಶ್ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

‘ಈ ಕಾರಣದಿಂದಲೇ ತೇಜಸ್ವಿ ಅವರ ಪ್ರಚಾರ ಸಭೆಗಳಲ್ಲಿ ಯುವಜನರು ಕಿಕ್ಕಿರಿದು ಸೇರುತ್ತಿದ್ದಾರೆ. ಎಷ್ಟರಮಟ್ಟಿಗೆ ಅಂದರೆ, ತೇಜಸ್ವಿ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಆರ್‌ಜೆಡಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ಯುವಕರು ಸೇರುತ್ತಿದ್ದಾರೆ. ಈ ವಿಚಾರದಲ್ಲಿಯೇ ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಎಡವಿದ್ದು’ ಎಂದು ರಾಕೇಶ್ ಅಭಿಪ್ರಾಯಪಟ್ಟಿದ್ದಾರೆ.

ಎದುರಾಳಿಗಳು ಮಾಡಿದ ವೈಯಕ್ತಿಕ ಟೀಕೆಗಳಿಗೆ ತೇಜಸ್ವಿ ಅವರು ನೇರ ಪ್ರತಿಕ್ರಿಯೆ ನೀಡಲೇ ಇಲ್ಲ. ವೈಯಕ್ತಿಕ ಟೀಕೆಗಳನ್ನು ಬಿಟ್ಟು ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿ, ಚರ್ಚೆಗೆ ಬನ್ನಿ ಎಂದು ನಿತೀಶ್ ಹಾಗೂ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

‘15 ವರ್ಷಗಳಲ್ಲಿ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆಗಳನ್ನು ಅವನತಿಗೆ ತಂದಿರುವುದನ್ನು ನಿತೀಶ್‌ ಒಪ್ಪಿಕೊಳ್ಳಲಿ. ಅವರು ಎರಡು ತಲೆಮಾರಿನ ಭವಿಷ್ಯವನ್ನೇ ಹಾಳುಗೆಡವಿದ್ದಾರೆ. ಈ ಕಾರಣದಿಂದಲೇ ಅವರು ನಿರುದ್ಯೋಗ, ಕೈಗಾರಿಕೆ, ಉದ್ಯೋಗ, ಬಂಡ
ವಾಳ ಹೂಡಿಕೆ ಮತ್ತು ವಲಸೆ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲ’ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.