ADVERTISEMENT

ರಸ್ತೆಗಳು ಹಾಳಾಗಿದ್ದರೆ ಕಡಿಮೆ ಅಪಘಾತಗಳಾಗುತ್ತವೆ: ತೆಲಂಗಾಣ ಬಿಜೆಪಿ ಸಂಸದ

ಪಿಟಿಐ
Published 4 ನವೆಂಬರ್ 2025, 15:25 IST
Last Updated 4 ನವೆಂಬರ್ 2025, 15:25 IST
   

ಹೈದರಾಬಾದ್‌: ರಸ್ತೆಗಳು ಉತ್ತಮವಾಗಿದ್ದರೆ ವಾಹನಗಳು ವೇಗವಾಗಿ ಸಂಚರಿಸುತ್ತವೆ, ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆಗಳು ಹಾಳಾಗಿದ್ದರೆ, ಕಡಿಮೆ ಅಪಘಾತಗಳಾಗುತ್ತವೆ ಎಂದು ಬಿಜೆಪಿ ಸಂಸದ ವಿಶ್ವೇಶ್ವರ್‌ ರೆಡ್ಡಿ ಅವರು ಮಂಗಳವಾರ ಹೇಳಿದ್ದಾರೆ.

ಸೋಮವಾರ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ಜಲ್ಲಿಕಲ್ಲು ತುಂಬಿದ ಲಾರಿಯೊಂದು ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದು 19 ಜನರು ಮೃತಪಟ್ಟಿದ್ದರು. 30ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಅದೇ ಕ್ಷೇತ್ರದ ಸಂಸದರಾಗಿರುವ ವಿಶ್ವೇಶ್ವರ್‌ ರೆಡ್ಡಿ ಅವರು ಆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಸಂಸದರು, ಘಟನೆಗೆ ಹಿಂದಿನ ಬಿಆರ್‌ಎಸ್‌ ಸರ್ಕಾರವನ್ನು ಹೊಣೆಯಾಗಿಸಿದರು. ಹೈದರಾಬಾದ್‌ – ಬಿಜಾಪುರ ಹೆದ್ದಾರಿ ನಿರ್ಮಾಣಕ್ಕಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಹಿಂದಿನ ಸರ್ಕಾರವು ವಿಳಂಬ ಮಾಡಿದ್ದೆ, ಈ ದುರಂತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ‌

ADVERTISEMENT

ಚೆವೆಲ್ಲಾ ಬಳಿ ನಿಜಾಮರ ಕಾಲದಲ್ಲಿ ಅನಂತಗಿರಿ ಬೆಟ್ಟಗಳಿಗೆ ಸಂಚರಿಸಲು ಮಾಡಿದ ರಸ್ತೆಗಳಲ್ಲೇ ಈಗಲೂ ಸಂಚರಿಸಲಾಗುತ್ತಿದೆ. ನಾನು ಸಂಸದನಾದ ನಂತರ ರಸ್ತೆ ದುರಸ್ತಿಗಾಗಿ ಬಿಆರ್‌ಎಸ್‌ ಸರ್ಕಾರಕ್ಕೆ ಮನವಿ ಮಾಡಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ. 2016ರಲ್ಲಿ ಈ ರಸ್ತೆಯನ್ನು ಹೈದರಾಬಾದ್‌ – ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿಸುವಂತೆ ನಿತಿನ್‌ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದೆ. ಆ ಪ್ರಸ್ತಾವಕ್ಕೆ ಒಪ್ಪಿಗೆ ಕೂಡ ಸಿಕ್ಕಿತ್ತು. ಅದರ ಜೊತೆಗೆ ಒಪ್ಪಿಗೆ ದೊರೆತ 8 ಹೆದ್ದಾರಿಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಬಿಆರ್‌ಎಸ್‌ ಸರ್ಕಾರವು ಭೂಮಿಯನ್ನು ವಶಪಡಿಸಿಕೊಳ್ಳಲು ವಿಳಂಬ ಮಾಡಿದ್ದರಿಂದ, ಈ ಹೆದ್ದಾರಿ ಪೂರ್ಣಗೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.