ರಂಗಾರೆಡ್ಡಿ ಜಿಲ್ಲೆ:ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಫ್ಲೆಕ್ಸ್‌ನಲ್ಲಿ ಶ್ರೀರಾಮನ ಅವತಾರದಲ್ಲಿ ಕಾಣಿಡಿಕೊಂಡಿದ್ದಾರೆ!
–ಹೌದು, ಇದನ್ನು ನಂಬಲೇ ಬೇಕು. ಯಾಕೆ ಅಂತೀರಾ? ಚಂದ್ರಶೇಕರ್ ರಾವ್ ಅವರನ್ನು ಶ್ರೀರಾಮನ ವೇಷದಲ್ಲಿರುವಂತೆ ಫ್ಲೆಕ್ಸ್‌ನಲ್ಲಿ ಮುದ್ರಿಸಿ ಆಳೆತ್ತರದ ಕಟೌಟ್ ಹಾಕಲಾಗಿದೆ.
ಟಿಆರ್‌ಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ(ಸೆ. 2ರಂದು) ನಾಲ್ಕು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೃಹತ್ ರ್‍ಯಾಲಿಯನ್ನೂ ಪಕ್ಷ ಹಮ್ಮಿಕೊಂಡಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ರ್‍ಯಾಲಿ ಆಯೋಜಿಸಲಾಗಿದ್ದು, ನಗರದಲ್ಲಿ ಈ ಫ್ಲೆಕ್ಸ್‌ಅನ್ನು ಪಕ್ಷದ ಕಾರ್ಯಕರ್ತರು ತಮ್ಮ ಭಾವಚಿತ್ರದೊಂದಿಗೆ ಹಾಕಿಕೊಂಡಿದ್ದಾರೆ.
ಬೃಹತ್ ಫ್ಲೆಕ್ಸ್‌ನಲ್ಲಿ ರಾಮನ ಅವತಾರದಲ್ಲಿರುವ ಚಂದ್ರಶೇಖರ್ ರಾವ್ ಕೈಯಲ್ಲಿ ಬಿಲ್ಲು, ಬೆನ್ನಿಗೆ ಬಾಣಗಳನ್ನು ಪೇರಿಸಿರುವ, ತಲೆಯ ಮೇಲೆ ಕಿರೀಟ, ಹಳದಿ ಕಚ್ಚೆಪಂಚೆ, ಕೆಂಗುಲಾಬಿಯ ಶಲ್ಯ, ರಾಜಪೋಷಾಕಿನ ಪಾದುಕೆ ಧರಿಸಿರುವಂತೆ ಬಿಂಬಿಸಲಾಗಿದೆ.
‘ಪ್ರಗತಿ ನಿವೇದನಾ’ ಹೆಸರಿನ ರ್‍ಯಾಲಿಯಲ್ಲಿ ಸುಮಾರು 25 ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಸದಸ್ಯರು ಕಾರ್ಯಕ್ರಕ್ಕೆ ಬಂದು ಸೇರುತ್ತಿದ್ದಾರೆ. ಪಕ್ಷವು 47 ಲಕ್ಷ ಸದಸ್ಯರನ್ನು ಹೊಂದಿದೆ. ಈ ಪೈಕಿ ಅರ್ಧದಷ್ಟು ಮಂದಿ ಭಾಗವಹಿಸಿದರೂ ರ್‍ಯಾಲಿ ಯಶಸ್ವಿಯಾಗಲಿದೆ ಎಂದು ರಾಮ ರಾವ್ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಅತಿ ದೊಡ್ಡ ರ‍್ಯಾಲಿ ಇದಾಗಿದ್ದು, ಮತದಾರರು ಬಹದಿನಗಳ ವರೆಗೆ ನೆನಪಿಡುವಂತಹದ್ದಾಗಲಿದೆ ಎಂದು ತೆಲಂಗಾಣ ಸಚಿವ ಹಾಗೂ ರಂಗಾರೆಡ್ಡಿ ಜಿಲ್ಲೆ ಟಿಆರ್‌ಎಸ್‌ನ ಪ್ರಗತಿ ನಿವೇದನಾ ಸಭಾದ ಮುಖಂಡಕೆ.ಟಿ. ರಾಮ ರಾವ್ ಹೇಳಿದ್ದಾರೆ ಎಂದು ಎಎನ್‌ಐ ಟ್ವಿಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.