ADVERTISEMENT

ತೆಲಂಗಾಣ | ದಲಿತ ಯುವನಕ ಮರ್ಯಾದೆಗೇಡು ಹತ್ಯೆ: ಅಪರಾಧಿಗೆ ಗಲ್ಲು ಶಿಕ್ಷೆ

ಪಿಟಿಐ
Published 10 ಮಾರ್ಚ್ 2025, 9:11 IST
Last Updated 10 ಮಾರ್ಚ್ 2025, 9:11 IST
<div class="paragraphs"><p>ಗಲ್ಲು ಶಿಕ್ಷೆ </p></div>

ಗಲ್ಲು ಶಿಕ್ಷೆ

   

ಹೈದರಾಬಾದ್‌: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣದ ಅಪರಾಧಿಗೆ ಇಲ್ಲಿನ ಎಸ್‌ಸಿ/ಎಸ್‌ಟಿ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ದಲಿತ ವ್ಯಕ್ತಿ ಪ್ರಣಯ್‌ (23) ಎಂಬುವರ ಹತ್ಯೆಯಾಗಿತ್ತು.

ನ್ಯಾಯಾಲಯವು ಪ್ರಕರಣದ ಎರಡನೇ ಆರೋಪಿಯಾದ ಸುಭಾಶ್‌ ಕುಮಾರ್‌ ಶರ್ಮಾಗೆ ಮರಣದಂಡನೆ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕೊಲೆ ಸಂಚನ್ನು ಕಾರ್ಯರೂಪಕ್ಕೆ ತಂದಿದ್ದ ಸುಭಾಶ್‌ ಬಿಹಾರ ಮೂಲದ ವ್ಯಕ್ತಿ.

ADVERTISEMENT

ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಪ್ರಣಯ್‌ ವಿವಾಹವಾಗಿದ್ದರು. ಇದಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪತಿಯ ಕೊಲೆಯಲ್ಲಿ ತನ್ನ ತಂದೆ ಮಾರುತಿ ರಾವ್‌ ಪಾತ್ರ ಇದೆ ಎಂದು ಯುವತಿ ಆರೋಪಿಸಿದ್ದರು.

ಕೊಲೆಗೆ ಸುಪಾರಿ:

ಅಳಿಯನ ಕೊಲೆಗೆ ಸಂಚು ರೂಪಿಸಿ, ಸುಪಾರಿ ನೀಡಿದ್ದ ಯುವತಿಯ ತಂದೆ ಮಾರುತಿ ರಾವ್‌, ಚಿಕ್ಕಪ್ಪ ಸೇರಿದಂತೆ ಎಂಟು ಜನರನ್ನು ಪೊಲೀಸರು 2018ರ ಸೆಪ್ಟೆಂಬರ್‌ 18ರಂದು ಬಂಧಿಸಿದ್ದರು. ಕೊಲೆಗೆ ₹ 1 ಕೋಟಿ ರೂಪಾಯಿ ಸುಪಾರಿಗೆ ಮಾತುಕತೆ ನಡೆಸಿದ್ದ ಯುವತಿಯ ತಂದೆ, ₹ 15 ಲಕ್ಷವನ್ನು ಮುಂಗಡ ಪಾವತಿಸಿದ್ದರು.

ಪ್ರಕರಣದಲ್ಲಿ ಮಾರುತಿ ರಾವ್‌ ಮೊದಲ ಆರೋಪಿಯಾಗಿದ್ದರೆ, ಸುಭಾಶ್‌ ಕುಮಾರ್‌ ಶರ್ಮಾ ಎರಡನೇ ಆರೋಪಿ. ಇವರೂ ಸೇರಿದಂತೆ ಇತರ ಆರೋಪಿಗಳಾದ ಅಸ್ಗರ್‌ ಅಲಿ, ಬಾರಿ, ಕರೀಂ, ಶ್ರವಣ ಕುಮಾರ್‌ (ಯುವತಿಯ ಚಿಕ್ಕಪ್ಪ), ಶಿವ, ನಿಜಾಂ ವಿರುದ್ಧ ಪೊಲೀಸರು 2019ರಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಬಂಧಿತರಲ್ಲಿ ಇಬ್ಬರು, ಗುಜರಾತಿನ ಮಾಜಿ ಗೃಹ ಸಚಿವ ಹರೇನ್‌ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ. 2020ರಲ್ಲಿ ಲಾಡ್ಜ್‌ವೊಂದರಲ್ಲಿ ಮಾರುತಿ ರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ಏನಾಗಿತ್ತು:

ಮಿರ್‍ಯಾಲಗೂಡದಲ್ಲಿ 2018ರ ಸೆಪ್ಟೆಂಬರ್‌ 14ರಂದು ತನ್ನ ತಾಯಿಯ ಜತೆಗೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ದುಷ್ಕರ್ಮಿಗಳು ಪ್ರಣಯ್‌ ಮೇಲೆ ದಾಳಿ ಮಾಡಿ ಚಾಕುವಿನಿಂದ ಕೊಂದಿದ್ದರು. ಈ ಪ್ರಕರಣ ತೆಲಂಗಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

‘ಇಂಥ ಕೃತ್ಯಗಳು ನಿಲ್ಲಲಿ’

‘ಪ್ರಣಯ್‌ ಕೊಲೆಯಿಂದ ನಾವು ಸಾಕಷ್ಟು ಕಳೆದುಕೊಂಡಿದ್ದೇವೆ. ನಾನು ಮಗನನ್ನು ಸೊಸೆ ಗಂಡನನ್ನು ಕಳೆದುಕೊಂಡಿದ್ದರೆ ಮೊಮ್ಮಗ ಅಪ್ಪನನ್ನು ಕಳೆದುಕೊಂಡಿದ್ದಾನೆ. ಈಗ ಒಬ್ಬರಿಗೆ ಮರಣದಂಡನೆ ಆರು ಜನರಿಗೆ ಜೀವಾವಧಿ ಶಿಕ್ಷೆಯಾಗಿದೆ. ಇದರಿಂದ ಅವರ ಕುಟುಂಬದವರೂ ಸಾಕಷ್ಟನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ರೀತಿಯ ಮಾರ್ಯಾದೆಗೇಡು ಹತ್ಯೆಗಳಿಗೆ ಈ ಆದೇಶ ಅಂತ್ಯವಾಡುತ್ತದೆ ಎಂಬ ನಂಬಿಕೆಯಿದೆ’ ಎಂದು ಪ್ರಣಯ್‌ ತಂದೆ ಪೆರುಮಾಳ ಬಾಲಸ್ವಾಮಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.