ADVERTISEMENT

ತೆಲಂಗಾಣ: ‘ಕೋಣ’ ಹೇಳಿಕೆ ವಿವಾದ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 15:25 IST
Last Updated 7 ಅಕ್ಟೋಬರ್ 2025, 15:25 IST
<div class="paragraphs"><p>ಅಡ್ಲೂರಿ ಲಕ್ಷ್ಮಣ್‌, ಪೊನ್ನಂ ಪ್ರಭಾಕರ್‌</p></div>

ಅಡ್ಲೂರಿ ಲಕ್ಷ್ಮಣ್‌, ಪೊನ್ನಂ ಪ್ರಭಾಕರ್‌

   

ಹೈದರಾಬಾದ್: ತೆಲಂಗಾಣದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಅವರು ಪರಿಶಿಷ್ಟ ಜಾತಿ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಅಡ್ಲೂರಿ ಲಕ್ಷ್ಮಣ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಕೇಳಿಬಂದಿದ್ದು, ವಿವಾದ ಹುಟ್ಟುಹಾಕಿದೆ.

ಜುಬಿಲಿ ಹಿಲ್ಸ್ ಉಪಚುನಾವಣೆ ಅಂಗವಾಗಿ ರಹಮತ್‌ ನಗರದಲ್ಲಿ ಈಚೆಗೆ ನಡೆದ ಪ್ರಚಾರ ಸಭೆಯಲ್ಲಿ ಪ್ರಭಾಕರ್‌ ಅವರು ಲಕ್ಷ್ಮಣ್‌ ಅವರನ್ನು ‘ದುನ್ನಪೋತು’ (ಕೋಣ) ಎಂದು ಕರೆದಿದ್ದಾರೆ ಎನ್ನಲಾಗಿದೆ.

ADVERTISEMENT

ಪ್ರಚಾರ ಸಭೆಗೆ ಲಕ್ಷ್ಮಣ್‌ ಅವರು ತಡವಾಗಿ ಬಂದಿದ್ದರು. ಪ್ರಭಾಕರ್‌ ಅವರು ಸಭೆಯಲ್ಲಿದ್ದ ಇನ್ನೊಬ್ಬ ಸಚಿವ ಜಿ.ವಿವೇಕ್‌ ಅವರಲ್ಲಿ ಲಕ್ಷ್ಮಣ್‌ ಅವರನ್ನು ಉದ್ದೇಶಿಸಿ ‘ಆವನು ಕೋಣ, ಅವನಿಗೇನು ಗೊತ್ತು’ ಎಂದು ಹೇಳಿದ್ದಾರೆ. ಮೈಕ್‌ ಆನ್‌ ಆಗಿದ್ದರಿಂದ ಅವರ ಹೇಳಿಕೆ ಸಭೆಯಲ್ಲಿದ್ದ ಎಲ್ಲರಿಗೂ ಕೇಳಿಸಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ದಲಿತ ಸಮುದಾಯಕ್ಕೆ ಸೇರಿರುವ ಲಕ್ಷ್ಮಣ್‌ ಅವರು ‘ಇದು ಜಾತಿ ನಿಂದನೆ’ ಎಂದು ದೂರಿದ್ದಾರೆ. ಪ್ರಭಾಕರ್ ಕ್ಷಮೆಯಾಚಿಸದಿದ್ದರೆ ಪಕ್ಷದ ಹೈಕಮಾಂಡ್‌ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಹಲವು ಎಸ್‌.ಸಿ ಶಾಸಕರು ಲಕ್ಷ್ಮಣ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಹೇಶ್‌ ಗೌಡ್‌ ಅವರನ್ನು ಭೇಟಿಯಾಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರ ಸೂಚನೆಯ ಮೇರೆಗೆ ಮಹೇಶ್ ಗೌಡ್ ಅವರು ಸಚಿವ ಲಕ್ಷ್ಮಣ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಬ್ಬರೂ ಸಚಿವರು ಸಮನ್ವಯದಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.

ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಪ್ರಭಾಕರ್‌ ನಿರಾಕರಿಸಿದ್ದು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.