ಕೆಸಿಆರ್, ರಾಜಲಿಂಗಮೂರ್ತಿ
ಹೈದರಾಬಾದ್: ತೆಲಂಗಾಣದ ‘ಕಾಳೇಶ್ವರಂ ನೀರಾವರಿ ಯೋಜನೆ’ಯಲ್ಲಿ ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಭಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಯಾಶಂಕರ ಭೂಪಾಲಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಭೂಪಾಲಪಲ್ಲಿ ಜಿಲ್ಲೆಯ ನಾಗವೆಲ್ಲಿ ರಾಜಲಿಂಗಮೂರ್ತಿ ಕೊಲೆಯಾದವರು.
ಫೆಬ್ರುವರಿ 19 ರಂದು ರಾತ್ರಿ ಜಯಾಶಂಕರ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಗ್ರಾಮವೊಂದಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹತ್ಯೆ ಮಾಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಹಂತಕರ ಬಂಧನ ಇನ್ನೂ ಆಗಿಲ್ಲ.
ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ನಾಯಕರು ಬಿಆರ್‌ಎಸ್ ಮೇಲೆ ವಾಗ್ದಾಳಿ ನಡೆಸಿವೆ. ಈ ಕೊಲೆಯ ಹಿಂದೆ ಮಾಜಿ ಶಾಸಕ ಬಿಆರ್‌ಎಸ್‌ನ ಗಂದ್ರಾ ವೆಂಕಟರಮಣ ರೆಡ್ಡಿ ಸೇರಿದಂತೆ ಅನೇಕ ಬಿಆರ್‌ಎಸ್ ನಾಯಕರಿದ್ದಾರೆ ಎಂದು ತೆಲಂಗಾಣ ಸಚಿವ ಕೋಮಿಟಿರೆಡ್ಡಿ ವೆಂಕಟರೆಡ್ಡಿ ಪತ್ರಿಕಾಗೋಷ್ಟಿಯಲ್ಲಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮೇಲೆ ಭಾರಿ ಭ್ರಷ್ಟಾಚಾರದ ಆರೋಪ ಮಾಡಿದ್ದರಿಂದಲೇ ಅವರ ಹತ್ಯೆಯಾಗಿದೆ ಎಂದು ರಾಜಲಿಂಗಮೂರ್ತಿ ಕುಟುಂಬದವರು ಆರೋಪಿಸಿದ್ದಾರೆ.
ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ನಾಗವೆಲ್ಲಿ ರಾಜಲಿಂಗಮೂರ್ತಿ ಜಯಾಶಂಕರ ಭೂಪಾಲಪಲ್ಲಿ ಜಿಲ್ಲಾಧಿಕಾರಿಗೆ ದೂರು ಹಾಗೂ ಹೈಕೋರ್ಟ್‌ಗೆ ಅರ್ಜಿ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.